ಮಂಗಳೂರು: ಇಸ್ಲಾಂ ಧರ್ಮ ಸ್ವೀಕೃತ, ಪರಿತ್ಯಕ್ತ ಮುಸ್ಲಿಮ್ ಮಹಿಳೆ ಆಸಿಯಾರನ್ನು ಪತಿ ಇಬ್ರಾಹಿಂ ಖಲೀಲ್ ಕಟ್ಟೆಕ್ಕಾರ್ ನಿರ್ಲಕ್ಷಿಸಿದ ಪರಿಣಾಮ ಆ ಮಹಿಳೆ ಇಂದು ಬೀದಿಗಿಳಿಯಲು ಕಾರಣರಾಗಿದ್ದಾರೆ.
ಆಸಿಯಾ ಅವರ ಪತಿಯ ಅಹಂಕಾರದ ವಿರುದ್ಧ ಮುಸ್ಲಿಮ್ ಒಕ್ಕೂಟ ತೀವ್ರವಾಗಿ ಪ್ರತಿಭಟಿಸಲಿದೆ ಮತ್ತು ನಿರ್ಲಕ್ಷಿತ ಮಹಿಳೆಯ ನ್ಯಾಯಯುತ ಹೋರಾಟಕ್ಕೆ ಸಂಪೂರ್ಣವಾಗಿ ಬೆಂಬಲ ನೀಡಲಿದೆ.
ಇಸ್ಲಾಮಿನ ಹೆಸರಿನಲ್ಲಿ ಮಹಿಳೆಯನ್ನು ಧರ್ಮಕ್ಕೆ ಆಹ್ವಾನಿಸಿ ಪ್ರಸ್ತುತ ಅನ್ಯಾಯಗೈದ ಕಟ್ಟೆಕಾರ್ ಇಬ್ರಾಹಿಂ ಖಲೀಲ್ ನ ಗೊಡ್ಡು ಪ್ರತಿಷ್ಠೆಯನ್ನು ಪ್ರಜಾಸತ್ತಾತ್ಮಕವಾಗಿ ಮುಸ್ಲಿಂ ಒಕ್ಕೂಟ ಎದುರಿಸಲಿದ್ದು, ಮಹಿಳೆಯ ಕಾನೂನಾತ್ಮಕ ಹೋರಾಟದ ಸರ್ವ ಹಂತದಲ್ಲೂ ಕೂಡ ಮುಸ್ಲಿಮ್ ಒಕ್ಕೂಟ ಬೆಂಬಲಿಸಲಿದೆ ಎಂದು ಅಧ್ಯಕ್ಷರಾದ ಕೆ.ಅಶ್ರಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಘಟನೆಯ ಹಿನ್ನೆಲೆ
ಜೂನ್ 22 ರಂದು ಬೆಂಗಳೂರಿನಲ್ಲಿ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ ಆಸಿಯಾ “ತನ್ನ ಗಂಡನಾದ ಸುಳ್ಯದ ಕಟ್ಟೆಕಾರ್ ಇಬ್ರಾಹಿಂ ಖಲೀಲ್ ರವರ ಇಚ್ಛೆಯ ಮೇರೆಗೆ ವಿವಾಹಕ್ಕೂ ಮೊದಲು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು 12.7.2017 ರಲ್ಲಿ ಇಬ್ರಾಹಿಂ ಖಲೀಲ್ ರವರನ್ನು ವಿವಾಹವಾಗಿರುತ್ತೇನೆ.
15.1.2020 ರವರೆಗೆ ನಮ್ಮ ಕೌಟುಂಬಿಕ ಜೀವನವು ಚೆನ್ನಾಗಿಯೇ ಇತ್ತು. ಸುಳ್ಯಕ್ಕೆ ಬಂದ ನಂತರ ಖಲೀಲ್ ರವರು ನನ್ನೊಂದಿಗೆ ಸಂಪೂರ್ಣವಾಗಿ ಸಂಬಂಧವನ್ನು ಬಿಟ್ಟಿರುತ್ತಾರೆ. ಪತಿಯ ಮನೆಯವರು ಕೂಡ ಅವರಿಗೆ ಸಹಕಾರ ನೀಡುತ್ತಿರುವುದರಿಂದ ನಾನು ಆರ್ಥಿಕ ಮತ್ತು ಕೌಟುಂಬಿಕ ಜೀವನವನ್ನು ಕಳೆದುಕೊಳ್ಳುವಂತಾಗಿದೆ. ಆದ್ದರಿಂದ ತನ್ನನ್ನು ಸುಳ್ಯದಲ್ಲಿರುವ ಪತಿಯ ಮನೆಗೆ ಸೇರಿಸಬೇಕು ಎಂದು ಮನವಿ ಮಾಡಿಕೊಂಡಿದ್ದರು.
ಮಹಿಳಾ ಆಯೋಗದ ಅಧ್ಯಕ್ಷರೊಡನೆ ಆಸಿಯಾರವರು ಸಮಾಲೋಚನೆ ನಡೆಸಿ ವಿನಂತಿ ಮಾಡಿಕೊಂಡ ಮೇರೆಗೆ ಅರ್ಜಿದಾರರನ್ನು ಆಕೆಯ ಪತಿಯ ಮನೆಗೆ ಸೇರಿಸಿ ಕಾನೂನು ನೆರವು ಹಾಗೂ ಅಗತ್ಯ ಕ್ರಮ ಕೈಗೊಂಡು ಆ ಕ್ರಮದ ಬಗ್ಗೆ ವರದಿಯನ್ನು 15 ದಿನಗಳೊಳಗೆ ಆಯೋಗಕ್ಕೆ ಕಳುಹಿಸಿಕೊಡುವಂತೆ ಅಧ್ಯಕ್ಷರು ಜೂ.24ರಂದು ಆದೇಶ ನೀಡಿದರು.
ಈ ಆದೇಶ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗೆ ಜಾರಿಯಾಗಿ ಅವರ ಸೂಚನೆಯಂತೆ ಸುಳ್ಯದ ಸಿಡಿಪಿಒ ಮತ್ತು ಸುಳ್ಯದ ಎಸ್ .ಐ.ಯವರು ಜೂ. 25ರಂದು ಸಂಜೆ ಸುಳ್ಯಕ್ಕೆ ಬಂದ ಆಸಿಯಾರನ್ನು ಕರೆದುಕೊಂಡು ಸುಳ್ಯದ ನಾವೂರು ರಸ್ತೆಯಲ್ಲಿರುವ ಕಟ್ಟೆ ಅಬ್ದುಲ್ಲರ ಮನೆಗೆ ಬಂದರು.ಆ ವೇಳೆಗೆ ಮನೆಯವರು ಬಾಗಿಲಿಗೆ ಬೀಗ ಹಾಕಿ ಹೋಗಿದ್ದರು . ಬಳಿಕ ಖಲೀಲ್ ಮತ್ತು ಮನೆಯವರನ್ನು ಪೋಲೀಸರು ಕರೆಸಿ ಹೇಳಿಕೆ ಪಡೆಯಲಾಯಿತು.
“ನಾನು ಆಕೆಯನ್ನು ಮದುವೆಯಾಗಿದ್ದೂ ಇಲ್ಲ . ಸಂಬಂಧ ಇಟ್ಟುಕೊಂಡಿದ್ದೂ ಇಲ್ಲ. ಸುಳ್ಳು ಹೇಳಿಕೊಂಡು ಬಂದ ಈಕೆಯನ್ನು ನಾವು ಮನೆಯೊಳಗೆ ಸೇರಿಸಿಕೊಳ್ಳುವುದೂ ಇಲ್ಲ” ಎಂದು ಖಲೀಲ್ ಮತ್ತು ಅವರ ಮನೆಯವರು ಹೇಳಿದರೆ, “ಇದು ನನ್ನ ಗಂಡನ ಮನೆ . ಅವರು ಮನೆಗೆ ಸೇರಿಸುವ ವರೆಗೆ ನಾನು ಇಲ್ಲೇ ಇರುತ್ತೇನೆ” ಎಂದು ಆಸಿಯಾ ಹೇಳಿಕೆ ನೀಡಿದರು.
ಎಸ್ಐ ಹರೀಶ್ ಮತ್ತು ಸಿಡಿಪಿಒ ಶ್ರೀಮತಿ ರಶ್ಮಿ ಅಶೋಕ್ ರವರು ಅವರಿಬ್ಬರ ಹೇಳಿಕೆಗಳನ್ನು ಪಡೆದು ಆಸಿಯಾರವರು ಮನೆಯ ಜಗುಲಿಯಲ್ಲಿ ಕುಳಿತಿರುವ ಫೋಟೊ ತೆಗೆದು , ಪೊಲೀಸ್ ವಾಹನ ಹಾಗೂ ಎ.ಎಸ್.ಐ. ,ಮಹಿಳಾ ಪೋಲೀಸ್ ಸಹಿತ ಮೂವರು ಪೊಲೀಸರನ್ನು ಅಲ್ಲಿ ಕಾವಲು ನಿಲ್ಲಿಸಿ ಹೋದರು.
ಈಗಲೂ ನ್ಯಾಯಕ್ಕಾಗಿ ಹೋರಾಡುತ್ತಿರುವ ಆಸೀಯಾ ಪರ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟವು ಬೆಂಬಲವನ್ನು ಘೋಷಿಸಿದ್ದು, ಖಲೀಲ್ ನ ದುರಹಂಕಾರ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ.