janadhvani

Kannada Online News Paper

ನಿಮ್ಮ ಜೀವನವನ್ನು ನೀವೇ ಕಾಪಾಡಿಕೊಳ್ಳಿ, ಪ್ರಧಾನಿ ನವಿಲುಗಳೊಂದಿಗೆ ಬ್ಯುಸಿಯಾಗಿದ್ದಾರೆ

ಹೊಸದಿಲ್ಲಿ: ದೇಶಾದ್ಯಂತ ಹರಡಿರುವ ಕೊರೊನಾ ಸಾಂಕ್ರಾಮಿಕ ರೋಗ ನಿಯಂತ್ರಣದ ವೈಫಲ್ಯದ ಕುರಿತು ಕಳೆದ ಕೆಲ ಸಮಯಗಳಿಂದ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರುತ್ತಲೇ ಬಂದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಮತ್ತೊಮ್ಮೆ ಮೋದಿ ಸರ್ಕಾರದ ವಿರುದ್ಧ ಟ್ವೀಟ್ ದಾಳಿ ನಡೆಸಿದ್ದಾರೆ.

ದೇಶದ ಜನತೆಯಲ್ಲಿ ಮನವಿ ಮಾಡಿರುವ ಅವರು ನಿಮ್ಮನ್ನು ಮತ್ತು ನಿಮ್ಮ ಜೀವನವನ್ನು ನೀವೇ ಕಾಪಾಡಿಕೊಳ್ಳಿ, ಯಾಕೆಂದರೆ ನಮ್ಮ ಪ್ರಧಾನಿ ನವಿಲುಗಳೊಂದಿಗೆ ಬ್ಯುಸಿಯಾಗಿದ್ದಾರೆ ಎಂದು ಟೀಕಿಸಿದ್ದಾರೆ. ಮೋದಿ ಸರ್ಕಾರವು ಜನರಿಗೆ ಆತ್ಮ ನಿರ್ಭರ ಭಾರತಕ್ಕೆ ಕರೆ ನೀಡಿದೆ. ಆದರೆ ನಿಮ್ಮನ್ನು ಮತ್ತು ನಿಮ್ಮ ಜೀವನವನ್ನು ನೀವೇ ಕಾಪಾಡಿಕೊಳ್ಳಿ ಎಂದು ರಾಹುಲ್ ಹೇಳಿದ್ದಾರೆ.

ಯೋಜಿತವಲ್ಲದ ಲಾಕ್‌ಡೌನ್‌ನ್ನು ಅನುಷ್ಠಾನಗೊಳಿಸಿದ್ದರ ಪರಿಣಾಮ ಕೊರೊನಾ ಸೋಂಕು ದೇಶಾದ್ಯಂತ ಹರಡಿದೆ. ದೇಶದೆಲ್ಲೆಡೆ ಕೊರೊನಾ ಸಾಂಕ್ರಾಮಿಕ ಕಾಯಿಲೆ ವ್ಯಾಪಕವಾಗಿ ಹರಡುತ್ತಿದ್ದು, ಈ ವಾರದಲ್ಲಿ ಐವತ್ತು ಲಕ್ಷದ ಗಡಿ ದಾಟಲಿದೆ. ಹತ್ತು ಲಕ್ಷ ಸಕ್ರಿಯ ಪ್ರಕರಣಗಳು ಕಂಡುಬರಲಿದೆ, ಯಾವುದೇ ಯೋಜನೆಯಿಲ್ಲದೆ ಲಾಕ್‌ಡೌನ್ ಜಾರಿಗೊಳಿಸಿರೋದು ಅಹಂಕಾರ ತುಂಬಿದ ವ್ಯಕ್ತಿಯ ಕೊಡುಗೆಯಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಕೊರೊನಾ ಸೋಂಕು ಭಾರತದಲ್ಲಿ ತೀವ್ರ ಸ್ವರೂಪ ಪಡೆಯುವ ಮೊದಲೇ ರಾಹುಲ್ ಗಾಂಧಿ ಟ್ವೀಟ್ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಆ ನಂತರವೂ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುವ ಬಗ್ಗೆ ಎಚ್ಚರಿಕೆ ನೀಡುತ್ತಲೇ ಬಂದಿದ್ದರು. ಈ ಮಧ್ಯೆ ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ 24 ಸಾವಿರ ಕೊರೊನಾ ಪ್ರಕರಣಗಳು ವರದಿಯಾಗಿವೆ. ಇಲ್ಲಿಯತನಕ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ 48 ಲಕ್ಷದ ಗಡಿ ದಾಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

error: Content is protected !! Not allowed copy content from janadhvani.com