ನವದೆಹಲಿ, ಸೆ. 9:- ಯಾವುದೇ ಸೂಚನೆಯಿಲ್ಲದೆ ಸರ್ಕಾರ ಲಾಕ್‍ಡೌನ್ ಘೋಷಿಸಿತ್ತು ಎಂದು ಆರೋಪಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಲಾಕ್‍ಡೌನ್ ಕರೋನ ವಿರುದ್ಧದ ದಾಳಿಯಲ್ಲ, ಆದರೆ, ಅಸಂಘಟಿತ ವಲಯದ ಮೇಲಿನ ದಾಳಿಯಾಗಿದೆ ಎಂದು ಟೀಕಿಸಿದ್ದಾರೆ. ರಾಹುಲ್ ಗಾಂಧಿ ಬುಧವಾರ ಬಿಡುಗಡೆ ಮಾಡಿರುವ ಆರ್ಥಿಕತೆಯ ಸದ್ಯದ ಸ್ಥಿತಿಯ ವೀಡಿಯೊ ಸರಣಿಯಲ್ಲಿ, ‘ಅಸಂಘಟಿತ ವಲಯದ ಮೇಲೆ ಮೂರನೇ ದಾಳಿಯನ್ನು ಕರೋನ ಹೆಸರಿನಲ್ಲಿ ಮಾಡಲಾಗಿದೆ.’ ಎಂದು ಟೀಕಿಸಿದ್ದಾರೆ.
‘ಬಡವರು, ಸಣ್ಣ ಮತ್ತು ಮಧ್ಯಮ ವ್ಯಾಪಾರಗಳಲ್ಲಿ ಕೆಲಸ ಮಾಡುವವರು, ದೈನಂದಿನ ಕೂಲಿ ಮಾಡುವವರು ದಿನದ ಗಳಿಕೆಯನ್ನು ಅಲಂಭಿಸಿ ಅದರಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಆದರೆ, ಸರ್ಕಾರ ಯಾವುದೇ ಮುನ್ಸೂಚನೆಯಿಲ್ಲದೆ ಲಾಕ್ ಡೌನ್ ಘೋಷಿಸುವ ಮೂಲಕ ಅವರ ಹೊಟ್ಟೆಯ ಮೇಲೆ ಹೊಡೆದಿದೆ.’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
‘ಕರೊನ ವಿರುದ್ಧ 21 ದಿನಗಳ ಹೋರಾಟ ನಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಆದರೆ, ಅಸಂಘಟಿತ ವಲಯದ ಬೆನ್ನೆಲುಬು 21 ದಿನಗಳಲ್ಲೇ ಮುರಿದಿದೆ.’ ಎಂದು ಅವರು ಹೇಳಿದ್ದಾರೆ.
ಲಾಕ್‍ಡೌನ್ ತೆರವಾದ ನಂತರ ಬಡವರಿಗೆ ಸಹಾಯ ಮಾಡುವುದು ಅತ್ಯಗತ್ಯ ಎಂದು ಕಾಂಗ್ರೆಸ್ ಈಗಾಗಲೇ ಸರ್ಕಾರಕ್ಕೆ ಹಲವಾರು ಬಾರಿ ಹೇಳಿದೆ. ‘ನ್ಯಾಯ್’ ನಂತಹ ಯೋಜನೆಯನ್ನು ಜಾರಿಗೆ ತರಬೇಕು. ಮತ್ತು ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗಳಲ್ಲಿ ಜಮಾ ಮಾಡಬೇಕು. ಆದರೆ ಸರ್ಕಾರ ಅದನ್ನು ಮಾಡಿಲ್ಲ ಎಂದು ರಾಹುಲ್‍ಗಾಂಧಿ ಹೇಳಿದ್ದಾರೆ.
‘ಸಣ್ಣ ಮತ್ತು ಮಧ್ಯಮ ವ್ಯಾಪಾರಗಳಿಗೆ ಸರ್ಕಾರ ಪ್ಯಾಕೇಜ್ ಸಿದ್ಧಪಡಿಸಬೇಕು ಎಂದು ನಾವು ಸೂಚಿಸಿದ್ದೇವೆ. ಈ ವ್ಯಾಪಾರಗಳನ್ನು ಉಳಿಸಬೇಕಾಗಿದೆ. ಹಣವಿಲ್ಲದೆ ಅವರು ಬದುಕಲು ಸಾಧ್ಯವಾಗುವುದಿಲ್ಲ. ಆದರೆ ಸರ್ಕಾರ ಏನೂ ಮಾಡಲಿಲ್ಲ. ಬದಲಾಗಿ, ಶ್ರೀಮಂತ ಹದಿನೈದು-ಇಪ್ಪತ್ತು ಜನರ ಕೋಟಿಗಟ್ಟಲೆ ಮೌಲ್ಯದ ತೆರಿಗೆಯನ್ನು ಸರ್ಕಾರ ಮನ್ನಾ ಮಾಡಿದೆ.’ ಎಂದು ರಾಹು್ಲ್ ಗಾಂಧಿ ಟೀಕಿಸಿದ್ದಾರೆ.
‘ಲಾಕ್‌ಡೌನ್ ಕರೋನ ವಿರುದ್ಧದ ದಾಳಿಯಲ್ಲಿ. ಬದಲಾಗಿ ಇದು ದೇಶದ ಬಡವರ ಮೇಲೆ ಎಸೆದ ದಾಳಿಯಾಗಿದೆ. ಇದು ನಮ್ಮ ಯುವಕರ ಭವಿಷ್ಯದ ಮೇಲಿನ ದಾಳಿಯಾಗಿದೆ.’ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಅಲ್ಲದೆ, ಲಾಕ್‍ಡೌನ್ ಕಾರ್ಮಿಕರು, ರೈತರು ಮತ್ತು ಸಣ್ಣ ವ್ಯಾಪಾರಿಗಳ ಮೇಲಿನ ದಾಳಿಯಾಗಿದೆ. ಅಸಂಘಟಿತ ವಲಯದ ಮೇಲಿನ ದೊಡ್ಡ ದಾಳಿ ಇದಾಗಿದೆ.ಇದನ್ನು ನಾವು ಅರ್ಥಮಾಡಿಕೊಳ್ಳಬೇಕು. ಈ ದಾಳಿಯ ವಿರುದ್ಧ ನಾವೆಲ್ಲರೂ ನಿಲ್ಲಬೇಕು ಎಂದು ರಾಹುಲ್‍ಗಾಂಧಿ ಮನವಿ ಮಾಡಿದ್ದಾರೆ.