ಮಂಗಳೂರು, ಸೆ.2:- ಮಂಗಳೂರಿನಲ್ಲಿ 2019ರ ಡಿ.19ರಂದು ನಡೆದಿದ್ದ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದ ಮ್ಯಾಜಿಸ್ಟ್ರೀಟ್ ವಿಚಾರಣೆ ಸೆ.1ರಂದು ಮುಕ್ತಾಯಗೊಂಡಿತು.
ಮ್ಯಾಜೆಸ್ಟ್ರೇಟ್, ಉಡುಪಿ ಜಿಲ್ಲಾಧಿಕಾರಿ ಡಾ ಜಿ.ಜಗದೀಶ್ ಅವರು ಅಂತಿಮ ವಿಚಾರಣೆಯ ದಿನದಂದು 45 ಮಂದಿ ಸಾರ್ವಜನಿಕರು, ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು, ವೈದ್ಯರು ಹಾಗೂ13 ಮಂದಿ ಪೊಲೀಸರ ಹೇಳಿಕೆ ಪಡೆದು ವಿಚಾರಣೆ ನಡೆಸಿದರು. ವಿಚಾರಣೆ ಅನಂತರ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಡಾ.ಜಿ.ಜಗದೀಶ್, ‘ಕೊನೆಯ ದಿನ ಅತ್ಯಧಿಕ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ವಿಚಾರಣೆಯಲ್ಲಿ ಪಾಲ್ಗೊಂಡರು. ವೀಡಿಯೊ ತುಣುಕು ಸೇರಿದಂತೆ ವಿವಿಧ ದಾಖಲೆಗಳು ಸಲ್ಲಿಕೆಯಾಗಿವೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು ಸುಮಾರು146 ಮಂದಿಯ ವಿಚಾರಣೆ ನಡೆದಿದೆ. ಕೊನೆಯ ದಿನ ದಕ್ಷಿಣ ಕನ್ನಡದ ಅಂದಿನ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಅವರಿಂದ ವೀಡಿಯೊ ಕಾನ್ಫರೆನ್ಸ್ ಮೂಲಕ ಹೇಳಿಕೆ ಪಡೆದುಕೊಳ್ಳಲಾಯಿತು. ಕಮಿಷನರ್ ಪರವಾಗಿ ಎಸಿಪಿಯವರು ಹೇಳಿಕೆ ಮತ್ತು ದಾಖಲೆಗಳನ್ನು ನೀಡಿದ್ದಾರೆ. ಎಫ್‌ಎಸ್‌ಎಲ್ ವರದಿಗೆ ಸಂಬಂಧಿಸಿ ಮೂವರು ವೈದ್ಯರ ಹೇಳಿಕೆ ಪಡೆಯಲಾಗಿದೆ. ವರದಿ ಸಲ್ಲಿಕೆಗೆ ಸರಕಾರ ಸೆ.20ರವರೆಗೆ ಅವಧಿ ನೀಡಿದೆ. ಅಷ್ಟರೊಳಗೆ ಸಲ್ಲಿಸಲಾಗುವುದು’ ಎಂದು ಹೇಳಿದರು.