ಬೆಂಗಳೂರು,ಆ.13: ಮೊನ್ನೆ ರಾತ್ರಿ ದೇವರ ಜೀವನಹಳ್ಳಿ ಸೇರಿದಂತೆ ಮೂರು ಪ್ರದೇಶಗಳಲ್ಲಿ ನಡೆದ ಗಲಭೆ ಘಟನೆಗಳ ಸಂಬಂಧ ಪೊಲೀಸರು ಈವರೆಗೆ 9 ಎಫ್ಐಆರ್ ದಾಖಲಿಸಿರುವುದು ತಿಳಿದುಬಂದಿದೆ. ಡಿಜೆ ಹಳ್ಳಿಯಲ್ಲಿ 6 ಹಾಗೂ ಕಾಡುಗೊಂಡನಹಳ್ಳಿಯಲ್ಲಿ (ಕೆಜಿ ಹಳ್ಳಿ) 3 ಎಫ್ಐಆರ್ ಹಾಕಲಾಗಿದೆ.
ಕೆಜಿ ಹಳ್ಳಿ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ಗಳಲ್ಲಿ 17 ಮಂದಿ ಎಸ್ಡಿಪಿಐ ಸದಸ್ಯರನ್ನು ಪ್ರಮುಖ ಆರೋಪಿಗಳೆಂದು ಹೆಸರಿಸಲಾಗಿದೆ. ಕಾವಲ್ ಬೈರಸಂದ್ರದಲ್ಲೂ ಗಲಭೆಗಳಾಗಿರುವ ಹಿನ್ನೆಲೆಯಲ್ಲಿ ಅಲ್ಲಿಯೂ ಎಫ್ಐಆರ್ ದಾಖಲಾಗುವ ಸಾಧ್ಯತೆ ಇದೆ.ಈಗ ಬಂಧಿತವಾಗಿರುವ ನಾಲ್ವರು ಪ್ರಮುಖ ಆರೋಪಿಗಳು ಸೇರಿ 150 ಮಂದಿಯನ್ನು ಇಂದು ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತಿದೆ.
ಇನ್ನು, ಮೊಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪಿ ನವೀನ್ನನ್ನು ಪೊಲೀಸರು ಐದು ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದ್ಧಾರೆ. ನಿನ್ನೆ ಈತನನ್ನು ವಿಡಿಯೋ ಕಾನ್ಫೆರೆನ್ಸ್ ಮೂಲಕ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಹೆಚ್ಚಿನ ತನಿಖೆಯ ಅಗತ್ಯದ ಕಾರಣದಿಂದ ಈತನನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಯಿತು.
ಮೊನ್ನೆ ಸಾವಿರದಷ್ಟು ಉದ್ರಿಕ್ತರು ಡಿಜೆ ಹಳ್ಳಿ, ಕೆಜಿ ಹಳ್ಳಿ ಮತ್ತು ಕಾವಲ್ ಬೈರಸಂದ್ರ ಪ್ರದೇಶಗಳಿಗೆ ನುಗ್ಗಿ ಗಲಭೆ ನಡೆಸಿದರು.ಗಲಭೆ ನಿಯಂತ್ರಿಸಲು ಪೊಲೀಸರು ಮಾಡಿದ ಫೈರಿಂಗ್ನಲ್ಲಿ ಮೂವರು ಗಲಭೆಕೋರರು ಸಾವನ್ನಪ್ಪಿದರು. ಈ ಘಟನೆಯಲ್ಲಿ 60 ಮಂದಿ ಪೊಲೀಸರಿಗೆ ಗಾಯಗಳಾಗಿದೆ.
ಈ ದಾಳಿಯ ಹಿಂದೆ ಎಸ್ಡಿಪಿಐ ಸಂಘಟನೆಯ ಕೈವಾಡ ಇದೆ ಎಂಬುದು ಪೊಲೀಸರ ಶಂಕೆ. ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರನ್ನು ನಿಂದಿಸಿ ಪೋಸ್ಟ್ ಹಾಕಿದ್ದ ನವೀನ್ ವಿರುದ್ಧ ದೂರು ನೀಡಲು ಎಸ್ಡಿಪಿಐ ಮುಖಂಡರು ಡಿಜೆ ಹಳ್ಳಿ ಪೊಲೀಸ್ ಠಾಣೆಗೆ ಹೋಗಿದ್ದರು. ದೂರು ಸ್ವೀಕರಿಸಲು ಪೊಲೀಸರು ವಿಳಂಬ ಮಾಡಿದರು. ಇದರಿಂದ ಜನರು ಪ್ರತಿಭಟನೆ ಮಾಡಿದ್ದಾರೆ. ತಮಗೂ ಈ ಗಲಭೆಗೂ ಸಂಬಂಧ ಇಲ್ಲ ಎಂದು ಎಸ್ಡಿಪಿಐ ಹೇಳಿಕೆ ನೀಡಿದೆ.