ಬೆಂಗಳೂರು: ತಮ್ಮ ಮೊಬೈಲ್‌ಗೆ ಬಂದ ಲಿಂಕ್ ಒಂದನ್ನು ಒತ್ತಿದ ಪರಿಣಾಮ ಮಹಿಳೆಯ ಮೊಬೈಲ್ ನಂಬರ್ ಹ್ಯಾಕ್ ಆಗಿ ಆಕೆಯ ನಂಬರ್‌ನಿಂದ ಎಲ್ಲಾ ಸ್ನೇಹಿತರಿಗೆ ಅಶ್ಲೀಲ ಫೋಟೋ-ವಿಡಿಯೊ ರವಾನೆಯಾಗಿವೆ. ತನಗೇ ಗೊತ್ತಿಲ್ಲದಂತೆ ಆದ ಅಚಾತುರ್ಯಕ್ಕೆ ತೀವ್ರ ಮುಜುಗರ ಮತ್ತು ಮಾನಸಿಕ ಹಿಂಸೆ ಅನುಭವಿಸಿದ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇದುವರೆಗೂ ಮೊಬೈಲ್ ಹ್ಯಾಕ್ ಆಗುವ ಲಿಂಕ್‌ಗಳನ್ನು ಕಳುಹಿಸಿ ಆ ಮೂಲಕ ಖಾತೆಗೆ ಕನ್ನ ಹಾಕಿ ಹಣ ಲಪಟಾಯಿಸುವ ಪ್ರಕರಣಗಳು ಮಾಮೂಲಾಗಿ ನಡೆಯುತ್ತಿದ್ದವು. ಈಗ ಸೈಬರ್ ಖದೀಮರು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ.
ಆಗಿದ್ದೇನು?
ಬಸವನಗುಡಿ ನಿವಾಸಿ 36 ವರ್ಷದ ವಿವಾಹಿತ ಮಹಿಳೆ ತಮ್ಮ ಕುಟುಂಬಸ್ಥರು ಮತ್ತು ಸ್ಥಳೀಯ ನಿವಾಸಿಗಳು ಹಾಗೂ ಸ್ನೇಹಿತರನ್ನೊಳಗೊಂಡ ಒಂದು ವಾಟ್ಸ್ಯಾಪ್ ಗ್ರೂಪಿನ ಅಡ್ಮಿನ್ ಆಗಿದ್ದಾರೆ. ಅಪರಿಚಿತ ನಂಬರ್‌ನಿಂದ ಜು.30 ರಂದು ಮಹಿಳೆ ಮೊಬೈಲ್‌ಗೆ ಒಂದು ಕರೆ ಬಂದಿತ್ತು.ಕರೆ ಸ್ವೀಕರಿಸಿದಾಗ “ನಿಮ್ಮ ನಂಬರ್‌ಗೆ ಲಿಂಕ್ ಬಂದಿದೆ ತೆರೆದು ನೋಡಿ” ಎಂದು ಅಪರಿಚಿತ ಧ್ವನಿ ಹೇಳಿತ್ತು. ಮರುಕ್ಷಣವೇ ಫೋನ್ ಕಟ್ ಆಗಿತ್ತು. ಮಹಿಳೆ ಕುತೂಹಲಕ್ಕಾಗಿ ಆ ಲಿಂಕ್ ಒತ್ತಿದ್ದಾರೆ. ತಕ್ಷಣ ಅವರ ಮೊಬೈಲ್ ನಂಬರ್ ಹ್ಯಾಕ್ ಆಗಿದೆ. ಪರಿಣಾಮ ಹ್ಯಾಕ್ ಆದ ಮೊಬೈಲ್ ನಂಬರ್‌ನಿಂದ ಅಶ್ಲೀಲ ಫೋಟೋ-ವಿಡಿಯೊಗಳು ಮಹಿಳೆ ಅಡ್ಮಿನ್ ಆಗಿದ್ದ ಗ್ರೂಪಿನ ಎಲ್ಲಾ ಸದಸ್ಯರಿಗೆ ರವಾನೆಯಾಗಿವೆ.
ಇದು ಮಹಿಳೆ ಬೇಕಂತಲೇ ಅಶ್ಲೀಲ ವಿಡಿಯೊ ರವಾನಿಸಿದ್ದಾರೆ ಎಂದೇ ಭಾಸವಾಗುತ್ತಿತ್ತು. ಮಾತ್ರವಲ್ಲದೆ ಮಹಿಳೆಯ ಮೊಬೈಲ್‌ನಲ್ಲಿ ಸೇವ್ ಆಗಿದ್ದ ಎಲ್ಲರ ನಂಬರ್‌ಗಳಿಗೆ ಅಶ್ಲೀಲ ಮೆಸೇಜ್ ಕೂಡ ಹೋಗಿದೆ. ಮೆಸೇಜ್ ಓದಿದವರು ಅದೇ ರೀತಿ ಅಶ್ಲೀಲ ಪ್ರತಿಕ್ರಿಯೆಗಳನ್ನೂ ರವಾನಿಸಲು ಶುರು ಮಾಡಿದ್ದರು. ಆಗಲೇ ಮಹಿಳೆಗೆ ತಮ್ಮ ನಂಬರ್ ಹ್ಯಾಕ್ ಆಗಿರುವುದು ಗೊತ್ತಾಗಿದೆ. ತಮಗಾದ ಮುಜುಗರ ಮತ್ತು ಮಾನಸಿಕ ಹಿಂಸೆಯಿಂದ ಬೇಸತ್ತು ಸೀದಾ ದಕ್ಷಿಣ ವಿಭಾಗ ಸೈಬರ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಈ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.
ಹಾಟ್ ಫೋಟೋ ಕಳುಹಿಸಿ
ಅಶ್ಲೀಲ ಫೋಟೋ ನೋಡಿದ ಒಂದಿಬ್ಬರು ನಿತ್ಯ ಈ ರೀತಿಯ ಫೋಟೋ ಕಳುಹಿಸುತ್ತಿರಿ. ಪ್ರತೀ ಫೋಟೋಗೆ ಹಣ ಕಳುಹಿಸುತ್ತೀವಿ. ನೀವು ಅರಾಮವಾಗಿ ಜೀವನ ಸಾಗಿಸಬಹುದು’ ಎಂದು ಪ್ರತಿಕ್ರಿಯಿಸಿದ್ದರು. ಹೀಗಾಗಿ ಮೊಬೈಲ್ ಹ್ಯಾಕ್ ಮಾಡಿರುವವರೂ ಇವರೇ ಇರಬಹುದು ಎನ್ನುವ ಅನುಮಾನ ಪೊಲೀಸರಿಗೆ ಬಂದಿದೆ.
‘ಲಿಂಕ್ ಓಪನ್ ಮಾಡಿ’ ಎಂದು ಕರೆ ಮಾಡಿದ್ದ ನಂಬರ್ ಸದ್ಯ ಅಸ್ತಿತ್ವದಲ್ಲಿ ಇಲ್ಲ. ಹೀಗಾಗಿ, ಪಳಗಿದ ಹ್ಯಾಕರ್‌ಗಳಿಂದಲೇ ಕೃತ್ಯ ನಡೆದಿರುವ ಸಾಧ್ಯತೆಗಳಿವೆ. ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.