ಮಂಗಳೂರು: ಗೋ ಸಾಗಾಟಗಾರರ ಮೇಲೆ ದಾಳಿ ಮಾಡುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಅವರನ್ನು ದಿಢೀರ್ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕಳೆದ ವರ್ಷ ಸಪ್ಟೆಂಬರ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದ ಸಿಂಧೂ ಬಿ ರೂಪೇಶ್ ಅವರನ್ನು ರಾಜ್ಯ ಸರ್ಕಾರ ತಕ್ಷಣವೇ ಜಾರಿ ಬರುವಂತೆ ವರ್ಗಾವಣೆಗೊಳಿಸಿ ಆದೇಶ ನೀಡಿದ್ದು, ಅವರ ಜಾಗಕ್ಕೆ ಬೆಳಗಾವಿ ಜಿಲ್ಲಾ ಪಂಚಾಯತ್ ಸಿ.ಇ.ಓ ಆಗಿದ್ದ ಡಾ.ರಾಜೇಂದ್ರ ಕೆವಿ ಅವರನ್ನು ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ.
ಸಿಂಧೂ ಬಿ ರೂಪೇಶ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಎರಡನೇ ಮಹಿಳಾ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಅದಕ್ಕೂ ಮೊದಲು ದಕ್ಷಿಣ ಕನ್ನಡ ಜಿಲ್ಲಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಅವರ ಸ್ಥಾನಕ್ಕೆ ಸಿಂಧೂ ರೂಪೇಶ್ ಅವರನ್ನು ನೇಮಕಗೊಳಿಸಿ ಸರ್ಕಾರ ಆದೇಶ ನೀಡಿತ್ತು.
ರಾಜಕೀಯ ಕೈವಾಡ?
ವರ್ಷ ತುಂಬುವ ಮೊದಲೇ ಜಿಲ್ಲಾಧಿಕಾರಿಯಾಗಿದ್ದ ಸಿಂಧೂ ಬಿ ರೂಪೇಶ್ ಅವರ ವರ್ಗಾವಣೆ ಹಿಂದೆ ರಾಜಕೀಯ ಒತ್ತಡ ಇದೆ ಎಂಬ ಮಂಗಳೂರಿನಲ್ಲಿ ಮಾತುಗಳು ಕೇಳಿ ಬರುತ್ತಿದೆ. ಗೋ ಸಾಗಾಟಗಾರರ ಮೇಲೆ ದಾಳಿ ಮಾಡುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದ ಜಿಲ್ಲಾಧಿಕಾರಿಯ ಈ ಹೇಳಿಕೆ ವಿರುದ್ಧ ಕೆಲವು ಕಿಡಿಗೇಡಿಗಳು ಆಕ್ಷೇಪ ವ್ಯಕ್ತಪಡಿಸಿ ಕೊಲೆ ಬೆದರಿಕೆ ಒಡ್ಡಿದ್ದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡು ಆರೋಪಿಗಳ ವಿರುದ್ಧ ತನಿಖೆ ಆರಂಭಿಸಿದ್ದರು. ಈ ಮಧ್ಯೆ ದಿಢೀರ್ ಆಗಿ ಸಿಂಧೂ ಬಿ ರೂಪೇಶ್ ಅವರನ್ನು ವರ್ಗಾವಣೆ ಮಾಡಿರುವುದರ ಹಿಂದೆ ರಾಜಕೀಯ ಒತ್ತಡವೂ ಇದೆ ಎನ್ನುವ ಮಾತುಗಳು ಕೇಳಿ ಬರ್ತಿದೆ.