ಅಬುಧಾಬಿ :ಈ ವರ್ಷದ ಮಾರ್ಚ್ 1 ರ ಮೊದಲು ವೀಸಾ ಅವಧಿ ಮುಗಿದವರು ದಂಡ ಪಾವತಿಸದೆ ಯುಎಇಯಿಂದ ಮನೆಗೆ ಮರಳಲು ಇನ್ನು ಭಾರತೀಯ ರಾಯಭಾರ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಪ್ರವಾಸಕ್ಕೆ ಕನಿಷ್ಠ ಏಳು ದಿನಗಳ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕೆಂದು ದೂತಾವಾಸದ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ವರ್ಷದ ಮಾರ್ಚ್ 1 ರ ಮೊದಲು ವೀಸಾ ಅವಧಿ ಮುಗಿದ ನಂತರ ಯುಎಇಯಲ್ಲಿ ಕಾನೂನುಬಾಹಿರವಾಗಿ ಉಳಿದುಕೊಂಡಿರುವವರಿಗೆ ಆಗಸ್ಟ್ 17 ರವರೆಗೆ ದಂಡವಿಲ್ಲದೆ ಮನೆಗೆ ಮರಳಲು ಯುಎಇ ಅಧಿಕಾರಿಗಳು ಅನುಮತಿ ನೀಡಿದ್ದರು. ಈ ಅವಕಾಶವನ್ನು ಪಡೆಯಲು ಬಯಸುವ ಭಾರತೀಯ ವಲಸಿಗರು ಈಗ ಭಾರತೀಯ ರಾಯಭಾರ ಕಚೇರಿ ಅಥವಾ ದೂತಾವಾಸದಲ್ಲಿ ವಿಶೇಷ ಅರ್ಜಿ ಸಲ್ಲಿಸಬೇಕು.
ರಾಯಭಾರ ಕಚೇರಿಯ ವೆಬ್‌ಸೈಟ್‌ನಲ್ಲಿ ಅರ್ಜಿ ಲಭ್ಯವಿರುತ್ತದೆ.
ಅಬುಧಾಬಿಯಲ್ಲಿರುವವರು ca.abudhabi@mea.gov.in ಗೆ ಮತ್ತು ಇತರ ಎಮಿರೇಟ್‌ಗಳಲ್ಲಿರುವವರು ದುಬೈನ ಭಾರತೀಯ ದೂತಾವಾಸದ cons2.dubai@mea.gov.in ನಲ್ಲಿ ಇಮೇಲ್ ಮೂಲಕ ಅರ್ಜಿ ಸಲ್ಲಿಸಬಹುದು
ಕಾನ್ಸುಲೇಟ್ ಮತ್ತು ರಾಯಭಾರ ಕಚೇರಿಯಲ್ಲಿರುವ ಡ್ರಾಪ್ ಬಾಕ್ಸ್‌ಗಳ ಮೂಲಕ ನೇರವಾಗಿಯೂ ಅರ್ಜಿ ಸಲ್ಲಿಸಬಹುದಾಗಿದೆ.
ಪಾಸ್ಪೋರ್ಟ್ ವಿವರಗಳು, ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸ ಮತ್ತು ವೀಸಾ ವಿವವರಗಳನ್ನು ದಾಖಲಿಸಿ,ಇವುಗಳ ಪ್ರತಿಗಳನ್ನು ಸಹ ಒದಗಿಸಬೇಕು. ಪಾಸ್‌ಪೋರ್ಟ್ ನಷ್ಟ ಹೊಂದಿರುವವರು ರಾಯಭಾರ ಕಚೇರಿ ಅಥವಾ ದೂತಾವಾಸವನ್ನು ಸಂಪರ್ಕಿಸಿ ಅದನ್ನು ಲಭ್ಯವಾಗುವಂತೆ ಮಾಡಬೇಕು. ಇದರ ನಂತರ ಮಾತ್ರ ನೀವು ವೀಸಾ ದಂಡ ಮನ್ನಾಕ್ಕೆ ಅರ್ಜಿ ಸಲ್ಲಿಸಬಹುದು.
ದೂತಾವಾಸ ಮತ್ತು ರಾಯಭಾರ ಕಚೇರಿಯಲ್ಲಿ ಸ್ವೀಕರಿಸಿದ ಅರ್ಜಿಗಳನ್ನು ಯುಎಇ ಅಧಿಕಾರಿಗಳಿಗೆ ರವಾನಿಸಲಾಗುತ್ತದೆ. ಅವರು ಅನುಮತಿ ನೀಡಿದ ನಂತರ, ಅರ್ಜಿದಾರರಿಗೆ ಫೋನ್ ಅಥವಾ ಇಮೇಲ್ ಮೂಲಕ ಮಾಹಿತಿ ನೀಡಲಾಗುತ್ತದೆ. ಅರ್ಜಿ ಸಲ್ಲಿಸಿದ ನಂತರ ಐದು ಕೆಲಸದ ದಿನಗಳಲ್ಲಿ ಮಾಹಿತಿ ಲಭ್ಯ. ಪ್ರಯಾಣಾನುಮತಿ ಪಡೆದವರು ಆದಷ್ಟು ಬೇಗ ತವರಿಗೆ ಮರಳಬೇಕೆಂದು ದೂತಾವಾಸದ ಅಧಿಕಾರಿಗಳು ತಿಳಿಸಿದ್ದಾರೆ.