ಮಂಗಳೂರು:ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೋನಾ ಅಟ್ಟಹಾಸ ಮೆರೆಯುತ್ತಿದೆ. ಹೀಗಾಗಿ ಜಿಲ್ಲೆಯನ್ನು ಲಾಕ್ ಡೌನ್ ಮಾಡುವುದು ಸೂಕ್ತ ಎಂಬ ನಿರ್ಧಾರಕ್ಕೆ ಜಿಲ್ಲಾಡಳಿತ ಬಂದಿದೆ ಈ ಹಿನ್ನೆಲೆಯಲ್ಲಿ ಗುರುವಾರದಿಂದ ಒಂದು ವಾರದ ಲಾಕ್ ಡೌನ್ ಆರಂಭಗೊಂಡಿದ್ದು, ಬೆಳಿಗ್ಗೆ 8 ರಿಂದ 11 ರತನಕ ಅಗತ್ಯ ಸಾಮಗ್ರಿಗಳ ಖರೀದಿಗೆ ಅವಕಾಶ ನೀಡಲಾಗಿದೆ.
ಮೊದಲ ದಿನವಾದ ಗುರುವಾರ ಅಗತ್ಯ ಸಾಮಗ್ರಿಗಳ ಅಂಗಡಿ ಮುಂಗಟ್ಟುಗಳು ತೆರೆದಿದ್ದರೂ ಜನ ದಟ್ಟಣೆ ಇರಲಿಲ್ಲ. ನಗರದಲ್ಲಿ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಮಳೆ ಸುರಿಯುತ್ತಿತ್ತು. ಮಲ್ಲಿಕಟ್ಟೆ, ಕಂಕನಾಡಿ, ಕೇಂದ್ರ ಮಾರುಕಟ್ಟೆ ಸೇರಿದಂತೆ ನಗರದಲ್ಲಿ ಖರೀದಿ ಭರಾಟೆ ವಿರಳವಾಗಿತ್ತು.
ಪೂರ್ವಭಾವಿಯಾಗಿ ಲಾಕ್‌ಡೌನ್ ಘೋಷಣೆ, ಪ್ರತಿನಿತ್ಯ ಖರೀದಿಗೆ ಅವಕಾಶ ಹಾಗೂ ಮಳೆಯ ಕಾರಣ ಗ್ರಾಹಕರ ದಟ್ಟಣೆ ಇಲ್ಲ ಎಂದು ವ್ಯಾಪಾರಸ್ಥರು ಅಭಿಪ್ರಾಯ ಪಟ್ಟರು.
ಮುಂದಿನ ಜುಲೈ 23ರ ಬೆಳಗ್ಗೆ 5 ಗಂಟೆವರೆಗೂ ಜಿಲ್ಲೆಯಲ್ಲಿ ಲಾಕ್‌ಡೌನ್ ಇರಲಿದೆ. ಈಗಾಗಲೇ ಮಂಗಳೂರು ತಾಲೂಕು ವ್ಯಾಪ್ತಿಯಲ್ಲೇ ಹೆಚ್ಚು ಸೋಂಕಿತರು ಕಂಡು ಬಂದಿರುವುದರಿಂದ ಲಾಕ್‌ಡೌನ್ ನಿಯಮ ಉಲ್ಲಂಘಿಸದಂತೆ ಹದ್ದಿನಕಣ್ಣಿಡುವ ನಿರ್ಧಾರ ಮಾಡಲಾಗಿದೆ. ಲಾಕ್‌ಡೌನ್ ಪಾಲನೆಗೆ ಜಿಲ್ಲಾಡಳಿತ ಈಗಾಗಲೇ ಗೈಡ್‌ಲೈನ್ಸ್ ಅನ್ನು ರೆಡಿ ಮಾಡಿದೆ.
ಲಾಕ್ ಡೌನ್ ವೇಳೆ ಜಿಲ್ಲೆಯಲ್ಲಿ ಏನಿರಲಿದೆ?
ಹಾಲು, ತರಕಾರಿ, ಮೊಟ್ಟೆ, ದಿನಸಿ ವಸ್ತುಗಳು, ಮಾಂಸ ಲಭ್ಯ, ತುರ್ತು ಆರೋಗ್ಯ ಸೇವೆಗಳು ಲಭ್ಯ, ಹೊಟೇಲ್ ಗಳಲ್ಲಿ ಪಾರ್ಸಲ್ ವ್ಯವಸ್ಥೆ ಲಭ್ಯ, ಅಗತ್ಯ ಸರ್ಕಾರಿ ಕಚೇರಿಗಳು ಹಾಗೂ ಕೃಷಿ ಸಂಬಂಧಿತ ಕಚೇರಿಗಳು ತೆರೆದಿರುತ್ತವೆ.
ಲಾಕ್ ಡೌನ್ ವೇಳೆ ಏನಿರಲ್ಲ ?
ಅನಗತ್ಯ ಓಡಾಟ, ಬಾರ್, ವೈನ್ ಶಾಪ್, ಹೊಟೇಲ್ ಸೇವೆ, ಖಾಸಗಿ ವಾಹನ ಸಂಚಾರ, ಬ್ಯಾಂಕ್ ಸೇವೆ, ಸಾರ್ವಜನಿಕ ಸಾರಿಗೆ, ಮಾಲ್, ಉದ್ಯಾನವನ, ದೇವಸ್ಥಾನ, ಮಸೀದಿ, ಚರ್ಚ್, ಕ್ರೀಡೆ, ಸಣ್ಣ ಕೈಗಾರಿಕೆ.
ಲಾಕ್ ಡೌನ್ ನಿಯಮ ಉಲ್ಲಂಘಿಸಿದರೆ ಭಾರತೀಯ ದಂಡ ಕಾಯಿದೆಯ ಅನುಸಾರ ಐಪಿಸಿ ಸೆಕ್ಷನ್ 56 ರಿಂದ 60, ಐಪಿಸಿ ಸೆಕ್ಷನ್ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಆದೇಶಿಸಿದ್ದಾರೆ.