ಬೆಂಗಳೂರು: ಬಳ್ಳಾರಿಯಲ್ಲಿ ಕೊರೊನಾ ಮೃತದೇಹವನ್ನ ತಿಪ್ಪೆಗೆ ಎಸೆದು ಹೋದಂತೆ ಹೋಗಿದ್ದಾರೆ ಅಂತಾ ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ಸರ್ಕಾರ ವಿರುದ್ಧ ಕೆಂಗಣ್ಣು ಬೀರಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿರುದ್ಧ ಗುಡುಗಿದ ಅವರು, ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ಸರ್ಕಾರಗಳ ಬೇಜವಾಬ್ದಾರಿ ತನ. ಭಾರತಕ್ಕೆ ಕೊರೊನಾ ಎದುರಿಸಲು ಬಹಳ ಸಮಯ ಇತ್ತು. ಇವರ ಬೇಜವಾಬ್ದಾರಿತನದಿಂದ, ನಿರ್ಲಕ್ಷ್ಯದಿಂದ, ಸರಿಯಾದ ಸಿದ್ಧತೆ ಇಲ್ಲದ ಕಾರಣ, ಇಂದು ನಾವು ಜಗತ್ತಿನ 4 ನೇ ಸ್ಥಾನದಲ್ಲಿದ್ದೇವೆ. ಈಗ ಸುಮಾರು 6,25,000 ಸಾವಿರ ಸೋಂಕಿತರು ಆಗಿದ್ದಾರೆ. ನಾವು 4ನೇ ಸ್ಥಾನಕ್ಕೆ ಹೋಗಬೇಕಾದ್ರೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಅಂತಾ ಗುಡುಗಿದರು.
ಕೊರೊನಾ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಏನು ಮಾಡುತ್ತಿವೆ? ಬೇರೆ ದೇಶಗಳಲ್ಲಿ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ನಮ್ಮಲ್ಲಿ ಸಾವಿನ ಸಂಖ್ಯೆ ಕಡಿಮೆ ಇದೆ ಅಂತಾರೆ. ಇವರ ಬೇಜವಾಬ್ದಾರಿತನದಿಂದಲೇ ಅವಘಢ ಸಂಭವಿಸಿದೆ ಎಂದು ಆರೋಪಿಸಿದ್ದಾರೆ.
ಶವದ ಜೊತೆಗೆ ವೈರಸ್ ಕೂಡ ಸಾಯುತ್ತದೆ
ಕೊರೊನಾದಿಂದ ಜನ ಸತ್ತಾಗ ಶವಸಂಸ್ಕಾರಕ್ಕೂ ಹೆದರುತ್ತಿದ್ದಾರೆ. ಶವಸಂಸ್ಕಾರದ ಬೂದಿ ತೆಗೆದುಕೊಳ್ಳಲು ಜನ ಹೆದರುತ್ತಾರೆ. ಜೀವಕೋಶ ಸತ್ತಾಗ, ಜೀವಿಯೂ ಕೂಡ ಸತ್ತು ಹೋಗುತ್ತದೆ. ಶವದ ಜೊತೆಗೆ ವೈರಸ್ ಕೂಡ ಸಾಯುತ್ತದೆ. ಗ್ಲೌಸ್ ಹಾಕಿಕೊಳ್ಳಬೇಕು, ಸಾಮಾಜಿಕ ಅಂತರ ಕಾಪಾಡಬೇಕು. ಅದರೆ ಸರ್ಕಾರದ ಕಡೆಯಿಂದಲೇ ಅಮಾನುಷವಾಗಿ ಮನುಕುಲಕ್ಕೆ ಅವಮಾನವಾಗಿ ನಡೆದುಕೊಳ್ಳಲಾಗುತ್ತಿದೆ ಅಂತಾ ಹೇಳಿದರು.
ಬಳ್ಳಾರಿಯಲ್ಲಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಸರ್ಕಾರದ ಬೇಜವಾಬ್ದಾರಿತನದಿಂದ ಆಗಿರುವ ಘಟನೆ ಇದು. ಮೊದಲೇ ಶವಸಂಸ್ಕಾರದ ಬಗ್ಗೆ ಮಾರ್ಗಸೂಚಿ ಏಕೆ ಹೊರಡಿಸಿಲ್ಲ? ಮೃತರ ದೇಹವನ್ನು ತಿಪ್ಪೆಗೆ ಎಸೆದಂತೆ ಎಸೆದು ಹೋಗಿದ್ದಾರೆ. ಆ ವ್ಯಕ್ತಿಗೆ ಏನು ಬೆಲೆ ಕೊಟ್ಟಂತೆ ಆಗುತ್ತದೆ? 6 ಜನರನ್ನು ಸಸ್ಪೆಂಡ್ ಮಾಡ್ತೀನಿ ಅಂದ್ರೆ, ಇದು ಸರೀನಾ? ಎಂದು ರಾಜ್ಯ ಸರ್ಕಾರವನ್ನ ಪ್ರಶ್ನೆ ಮಾಡಿದ್ದಾರೆ.