janadhvani

Kannada Online News Paper

ಕಾಂತಪುರಂ ಉಸ್ತಾದರ ಮಧ್ಯಸ್ಥಿಕೆ: ದುಬೈಯಿಂದ ತಾಯ್ನಾಡು ತಲುಪಿದ ಅನಿವಾಸಿ ಕನ್ನಡಿಗರು

ಮಂಗಳೂರು:ತವರಿಗೆ ಮರಳಲು ಸಾಧ್ಯವಾಗದೆ ಸಂಕಷ್ಟಕ್ಕೊಳಗಾಗಿದ್ದ ಅನಿವಾಸಿ ಕನ್ನಡಿಗರನ್ನು ಕರ್ನಾಟಕ ಕಲ್ಚರಲ್ ಫೌಂಡೇಷನ್ ವಿಶೇಷ ಚಾರ್ಟರ್ಡ್ ವಿಮಾನಗಳ ಮೂಲಕ ಕರೆತರುವ ವ್ಯವಸ್ಥೆ ಮಾಡುತ್ತಿದ್ದು, ಪ್ರಥಮ ವಿಮಾನ ದುಬೈನಿಂದ ಕೇರಳದ ಕಣ್ಣೂರಿಗೆ 188 ಪ್ರಯಾಣಿಕರೊಂದಿಗೆ ಬಂದಿಳಿಯಿತು. ಇದರಲ್ಲಿ 160 ಕನ್ನಡಿಗರಿದ್ದರು.

ಸುಮಾರು ಎರಡು ತಿಂಗಳಿಂದೀಚೆಗೆ ಕನ್ನಡಿಗರಿಗಾಗಿ ಚಾರ್ಟರ್ಡ್ ವಿಮಾನವನ್ನು ಸಜ್ಜುಗೊಳಿಸಲು ಯುಎಇ ಕೆಸಿಎಫ್ ಹರಸಾಹಸಪಡುತ್ತಿದ್ದು, ಕರ್ನಾಟಕದ ವಿಮಾನ ನಿಲ್ದಾಣಕ್ಕೆ ಅನುಮತಿ ಲಭಿಸದ ಹಿನ್ನೆಲೆಯಲ್ಲಿ ಕೇರಳ ಮತ್ತು ಕರ್ನಾಟಕ ಸರ್ಕಾರದೊಂದಿಗೆ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಚರ್ಚೆ ನಡೆಸಿ, ಕನ್ನಡಿಗರನ್ನು ಕೇರಳಕ್ಕೆ ಕರೆತಂದು ಕರ್ನಾಟಕ ಗಡಿ ಪ್ರವೇಶಕ್ಕಿರುವ ಅನುಮತಿ ಸಿಗುವಂತೆ ಮಾಡುವಲ್ಲಿ ಯಶಸ್ವಿಯಾದರು.

ಕರ್ನಾಟಕದಲ್ಲಿ ಪ್ರತಿಯೊಬ್ಬ ಯಾತ್ರಾರ್ಥಿಗಳಿಗೆ ಬೇಕಾದ ಕ್ವಾರಂಟೈನ್ ವ್ಯವಸ್ಥೆಯನ್ನು ಸಿದ್ಧಪಡಿಸಿದ ಕೆಸಿಎಫ್, ಅನಿವಾಸಿಗಳ ಬೇಡಿಕೆಯಂತೆ ಹೋಟೆಲ್ ಗಳನ್ನು ಬುಕ್ ಮಾಡಿತ್ತು. ಆದರೆ ಅನಿವಾಸಿಗಳು ಪ್ರಯಾಣ ಬೆಳೆಸಿದ ದಿನ ಕರ್ನಾಟಕ ಸರಕಾರದ ಹೊಸ ನಿಯಮ ಜಾರಿಗೆ ಬಂದಿದ್ದು, ಕೇರಳದಲ್ಲಿ ಬಂದಿಳಿದ ಕನ್ನಡಿಗರಿಗೆ ಗಡಿದಾಟಲು ಸಾಧ್ಯವಾಗದೆ, ಕಾಸರಗೋಡಿನಲ್ಲಿ ತಾತ್ಕಾಲಿಕ ಕ್ವಾರಂಟೈನ್ ವ್ಯವಸ್ಥೆ ಏರ್ಪಡಿಸಲಾಗಿತ್ತು.

ಕೋವಿಡ್ -19 ಕ್ವಾರಂಟೈನ್ ವ್ಯವಸ್ಥೆಯಲ್ಲಿ ಕರ್ನಾಟಕ ಮತ್ತು ಕೇರಳದ ಅನಿವಾಸಿಗರಿಗೆ ವ್ಯತ್ಯಾಸವಿದ್ದು, ಕೇರಳಿಗರಿಗೆ ಹೋಂ ಕ್ವಾರಂಟೈನ್ ಸರ್ಕಾರ ನಿಗದಿಪಡಿಸಿದ್ದರೆ, ಕನ್ನಡಿಗರಿಗೆ ಹೋಟೆಲ್ ಕ್ವಾರಂಟೈನ್ ಕರ್ನಾಟಕ ಸರ್ಕಾರ ನಿಗದಿಪಡಿಸಿದೆ. ಇದು ಕೇರಳದಲ್ಲಿ ಇಳಿದ ಕನ್ನಡಿಗರಲ್ಲಿ ಗೊಂದಲವನ್ನುಂಟು ಮಾಡಿತ್ತು. ಎ.ಪಿ.ಉಸ್ತಾದರು ಎರಡೂ ಸರಕಾರದ ಉನ್ನತಾಧಿಕಾರಿಗಳನ್ನು ಸಂಪರ್ಕಿಸಿ ಕನ್ನಡಿಗರು ಗಡಿದಾಟುವಂತೆ ಮಾಡಿದರು.

ಕರ್ನಾಟಕದ ಮಾಜಿ ಸಚಿವರೂ , ಉಳ್ಳಾಲ ಶಾಸಕರು ಆದ ಯುಟಿ ಖಾದರ್ ರವರು ಕನ್ನಡಿಗರ ಸಂಕಷ್ಟದಲ್ಲಿ ಕೆ.ಸಿ.ಎಫ್ ಜೊತೆ ಸಂಪೂರ್ಣ ಸಹಕಾರ ನೀಡಿ ಸಮಸ್ಯೆಯಾಗದಂತೆ ನೋಡಿಕೊಳ್ಳುವ ಮೂಲಕ ದನಿ ಗೂಡಿಸಿದರು.

ಪ್ರತಿಯೊಬ್ಬ ಯಾತ್ರಾರ್ಥಿ ಅನಿವಾಸಿ ಕನ್ನಡಿಗರ ಮಾಹಿತಿಯನ್ನು ಸೇವಾ ಸಿಂದು ಅಪ್ಲಿಕೇಶನ್ ನಲ್ಲಿ ಭರ್ತೀ ಮಾಡಿ, ಜೊತೆಗೆ ಕ್ವಾರಂಟೈನ್ ಮಾಹಿತಿಯನ್ನು ಪ್ರತಿಯೊಬ್ಬ ಯಾತ್ರಾರ್ಥಿಗೆ ಕೆ.ಸಿ.ಎಫ್ ಕಾರ್ಯಕರ್ತರು ದುಬೈನಲ್ಲೇ ನೀಡಿ ಸಹಕರಿಸಿದ್ದರು. ಜೊತೆಗೆ ಕಣ್ಣೂರಿನಲ್ಲಿ ಯಾತ್ರಾರ್ಥಿ ಕನ್ನಡಿಗರಿಗೆ ಆಹಾರ ವನ್ನು ಸ್ದಳೀಯ SYS,SSF ಸಾಂತ್ವನ ವಿಭಾಗ ನೀಡುವ ಮೂಲಕ ಮಾದರಿಯಾಯಿತು.

ಕರ್ನಾಟಕ ಗಡಿಯಾದ ತಲಪಾಡಿಯಲ್ಲಿ ಕರ್ನಾಟಕದ ಮಾಜಿ ಸಚಿವರೂ ಆದ ಯುಟಿ ಖಾದರ್ , ಕೆ.ಸಿ.ಎಫ್ ಅಂತರಾಷ್ಟೀಯ ನಾಯಕರಾದ ಹಾಜಿ ಶೇಖ್ ಬಾವಾ, ಅಶ್ರಫ್ ಕಿನಾರ ಸಹಿತ ಸಂಘಟನೆಯ ನಾಯಕರುಗಳು ಅನಿವಾಸಿ ಕನ್ನಡಿಗರನ್ನು ಸ್ವಾಗತಿಸಿದರು.

ಯಾತ್ರಿಕರು ಒಂದು ದಿನ ವಿಳಂಬವಾಗಿ ತಲುಪಿದ ಕಾರಣ ಈಗಾಗಲೇ ಕರ್ನಾಟಕದಲ್ಲಿ ನಿಗದಿ ಪಡಿಸಲಾಗಿದ್ದ ಹೋಟೆಲ್ ಕೊಠಡಿಗಳು ಲಭಿಸದೆ, ಅಲ್ಪ ಮಟ್ಟಿನ ಸಮಸ್ಯೆ ಎದುರಿಸುವಂತಾದರೂ, ಕನ್ನಡ ಮಣ್ಣಿಗೆ ಕಾಲಿರಿಸಿದ ಸಂತಸದಲ್ಲಿರುವ ಅನಿವಾಸಿ ಮಿತ್ರರು ಕೆಸಿಎಫ್ ಆಯೋಜಿಸಿದ ಈ ಸೇವೆಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

error: Content is protected !! Not allowed copy content from janadhvani.com