ಮಂಗಳೂರು: ಜಾಕಿ ಯಾನೆ ಝಾಕಿರ್ ಮತ್ತು ರಿಯಾಝುದ್ದೀನ್ ವಿರುದ್ಧ ಕೇಸು ದಾಖಲಿಸಿದ್ದು ನನ್ನ ಗಮನಕ್ಕೆ ಬಂದಿರಲಿಲ್ಲ ಎಂದು ಮಂಗಳೂರು ಖಾಝಿಯವರು ಸ್ಪಷ್ಟಪಡಿಸಿದ್ದಾರೆ.
ನಗರದ ಬಂದರು ನಿವಾಸಿಯೂ, ಸಮಾಜ ಸೇವಕನೂ ಆಗಿರುವ ಜಾಕಿ ಯಾನೆ ಝಾಕಿರ್ ಮತ್ತು ರಿಯಾಝ್ ವಿರುದ್ಧ ಸುಳ್ಳು ದೂರು ನೀಡಿರುವ ಪ್ರಕರಣವು ಸಾಮಾಜಿಕ ತಾಣದಲ್ಲಿ ಭಾರೀ ಚರ್ಚೆಗೆ ಗುರಿಯಾಗುತ್ತಿದ್ದಂತೆ, ಪ್ರತಿಕ್ರಿಯೆ ನೀಡಿರುವ ಬಹು: ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ ಹರಿ, ಪ್ರಕರಣ ಸಂಬಂಧಿಸಿದಂತೆ ದೂರು ದಾಖಲಿಸಿರುವ ಅಬ್ದುರ್ರಝ್ಝಾಖ್ ಅವರೊಂದಿಗೆ ವಿಚಾರಿಸಿದ್ದು” ದೂರು ದಾಖಲಿಸಲಾಗಿದೆ ಮತ್ತು ಅದು ನನ್ನ ವೈಯಕ್ತಿಕ ವಿಚಾರವಾಗಿದೆ” ಎಂದು ರಝ್ಝಾಖ್ ಹೇಳಿರುವುದಾಗಿ ಸ್ಪಷ್ಟೀಕರಣ ನೀಡಿರುವ ಖಾಝಿಯವರು, ಇಂತಹಾ ಅಪಪ್ರಚಾರಗಳಿಂದ ಸಮುದಾಯ ದೂರ ಸರಿಯಬೇಕೆಂದು ಸಲಹೆ ನೀಡಿದ್ದಾರೆ.
ಬಂದರು ಪ್ರದೇಶದ ಸಮಾಜ ಸೇವಕ ಜಾಕಿ ಯಾನೆ ಝಾಕಿರ್ ರವರು ಜೂ.13ರಂದು ದ.ಕ.ಜಿಲ್ಲಾ ಖಾಝಿಯವರನ್ನು ಕೇಂದ್ರ ಜುಮ್ಮಾ ಮಸೀದಿಯ ಮುಂದೆ ಅಡ್ಡಗಟ್ಟಿ ತಲವಾರು ಝಲಪಿಸಿ ಕೊಲೆ ಬೆದರಿಕೆ ಹಾಕಿದ್ದಾರೆಂದೂ ಮಾತ್ರವಲ್ಲ ಖಾಝಿ ಭವನಕ್ಕೂ ಹೋಗಿ ನಿಂದಿಸಿದ್ದಾಗಿಯೂ ಈ ಪ್ರಕರಣಕ್ಕೆ ರಿಯಾಝುದ್ದೀನ್ ಎಂಬವರು ಕುಮ್ಮಕ್ಕು ನೀಡಿದ್ದಾರೆಂದೂ ಇಬ್ಬರ ಮೇಲೆ ರಝಾಕ್ ಎಂಬವರು ದಿನಾಂಕ 15-6-2020 ಕ್ಕೆ ಬಂದರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಎಫ್.ಐ.ಆರ್ ಮಾಡಿಸಿದ್ದಾರೆ.
ಇದರ ಹಿಂದೆ ರಾಜಕೀಯ ಷಡ್ಯಂತ್ರ ಇರುವುದಾಗಿ ತಿಳಿದು ಬರುತ್ತಿದೆ. ಮಂಗಳೂರು ಕೇಂದ್ರ ಜುಮಾ ಮಸೀದಿಗೆ ಸಾವಿರದ ನಾಲ್ಕುನೂರು ವರ್ಷಗಳ ಇತಿಹಾಸವಿದ್ದು ಇದೊಂದು ಪುರಾತನ ಕೇಂದ್ರವಾಗಿರುತ್ತದೆ. ಪ್ರಸ್ತುತ ಸುಳ್ಳು ಕೇಸು ದಾಖಲಿಸಿರುವುದು ಈ ಪವಿತ್ರ ಸ್ಥಳಕ್ಕೆ ಕಳಂಕ ತರುವಂತಾಗಿದ್ದು ಇದರ ಬಗ್ಗೆ ಸರಿಯಾಗಿ ತನಿಖೆ ನಡೆಸಿ ಈ ಷಡ್ಯಂತ್ರದ ಹಿಂದಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಂಗಳೂರು ಕೇಂದ್ರ ಜುಮಾ ಮಸೀದಿಯ ಆಡಳಿತ ಸಮಿತಿಯ ಉಪಾಧ್ಯಕ್ಷರಾದ ಮಾಜಿ ಮೇಯರ್ ಕೆ.ಅಶ್ರಫ್ ಅವರು ಆಗ್ರಹಿಸಿದ್ದಾರೆ.