janadhvani

Kannada Online News Paper

ಡೈಲಿ ಹಂಟ್ ನ್ಯೂಸ್ ಅಪ್ಲಿಕೇಶನ್ ಬಗ್ಗೆ ನಿಮಗೆಷ್ಟು ಗೊತ್ತು?

ಡೈಲಿಹಂಟ್ ನಿಮಗೆ ಗೊತ್ತಲ್ಲ, ಗೊತ್ತಿರಲೇಬೇಕು. ಅದನ್ನು ನೀವು ಗೂಗಲ್ ಪ್ಲೇಸ್ಟೋರ್ ಗೆ ಹೋಗಿಯೇ ಡೌನ್ ಲೋಡ್ ಮಾಡಿಕೊಳ್ಳಬೇಕಿಲ್ಲ. ಅದು ನೀವು ಮೊಬೈಲ್ ಕೊಂಡಾಗಲೇ ಅದರೊಳಗೆ install ಆಗಿಬಿಟ್ಟಿರುತ್ತದೆ. ಬಹುತೇಕ ಮೊಬೈಲ್ ಕಂಪೆನಿಗಳ ಜತೆ ಅದರ ಒಡಂಬಡಿಕೆ ಇರುತ್ತದೆ. ಡೈಲಿಹಂಟ್ ಒಂದು ಸ್ಚತಂತ್ರ ನ್ಯೂಸ್ ಏಜೆನ್ಸಿ ಏನಲ್ಲ. ಅದು ತನ್ನ ರಿಪೋರ್ಟರ್ ಗಳು, ಕ್ಯಾಮೆರಾಮ್ಯಾನ್ ಗಳನ್ನು ಕಳಿಸಿ ಸುದ್ದಿ ತರಿಸುವುದಿಲ್ಲ. ಇಂಡಿಯಾದಲ್ಲಿ ಒಟ್ಟು ಮೂರು ಸಾವಿರಕ್ಕೂ ಅಧಿಕ ಪತ್ರಿಕೆಗಳು, ಚಾನಲ್ ಗಳು, ನ್ಯೂಸ್ ಏಜೆನ್ಸಿಗಳು ಮತ್ತು ನ್ಯೂಸ್ ಪೋರ್ಟಲ್ ಗಳ ಸುದ್ದಿಗಳನ್ನೇ ಅದು ನೇರವಾಗಿ ನಿಮ್ಮ ಮೊಬೈಲ್ ಗೆ ಕಳಿಸುತ್ತದೆ. ಆ ಎಲ್ಲ ಸಂಸ್ಥೆಗಳ ಜತೆಯೂ ಅದು ಒಪ್ಪಂದ ಮಾಡಿಕೊಂಡಿರುತ್ತದೆ.

ಈ ಥರದ News aggregater ಚೀನಾದಲ್ಲಿ ಜನಪ್ರಿಯವಾಗಿತ್ತು. ಅದರ ತದ್ರೂಪು ನ್ಯೂಸ್ ಹಂಟ್ ಎಂಬ ಹೆಸರಿನಲ್ಲಿ ಬೆಂಗಳೂರಿನಲ್ಲಿ ಶುರುವಾಗಿ ಅದು ಡೈಲಿಹಂಟ್ ಆಗಿ ಬದಲಾಯಿತು‌. Once again ಡೈಲಿಹಂಟ್ ಗೂ ನಾವು individual profile ಗಳು. ನಿಮಗೆ ರಾಜಕಾರಣ ಇಷ್ಟದ ವಿಷಯವೆಂದರೆ ‘ಯಡಿಯೂರಪ್ಪ ವಿರುದ್ಧ ಸಂತೋಷ್ ಮಸಲತ್ತು’ ಎಂಬ ಸುದ್ದಿ ತೂರಿಬರುತ್ತದೆ. ನೀವು ಕ್ರಿಕೆಟ್ ಪ್ರಿಯರಾಗಿದ್ದರೆ ‘ಕಳೆದ ವರ್ಲ್ಡ್ ಕಪ್ ಫೈನಲ್ ನಲ್ಲಿ ಧೋನಿ ಹೊಡೆದ ಸಿಕ್ಸರ್ ಗಳೆಷ್ಟು ಗೊತ್ತಾ?’ ಎಂಬ ಹೆಡ್ ಲೈನು ನಿಮ್ಮನ್ನು ಸುದ್ದಿಯೊಳಗೆ ಎಳೆದೊಯ್ಯುತ್ತದೆ. ಪೊಲಿ ಹುಡುಗರ ಮೊಬೈಲಿಗೆ ‘ಅವತ್ತು ಆ ರಾತ್ರಿರಾಣಿ ಮಂಚದ ಮೇಲೆ ಮಾಡಿದ್ದೇನು ಗೊತ್ತಾ?’ ಎಂಬಂಥ ಹೆಡ್ಡಿಂಗುಗಳ ನೋಟಿಫಿಕೇಷನ್ನು ದಂಡಿಯಾಗಿ ಬಿದ್ದಿರುತ್ತವೆ. ಅರ್ಥಾತ್ ಯಾರಿಗೆ ಏನು ಬೇಕೋ ಅದನ್ನು ಕೊಡುತ್ತದೆ ಡೈಲಿಹಂಟ್. ಇದೂ ಕೂಡಾ ಸಾವಿರಾರು ಕೋಟಿ ರುಪಾಯಿಗಳ ಬಂಡವಾಳದ ವ್ಯವಹಾರ. ಇದಕ್ಕೂ‌ ವಿದೇಶಿ ಕಂಪೆನಿಗಳ ಬಂಡವಾಳ ಹರಿದುಬಂದಿದೆ.

ಭಕ್ತರಿಗೆ ಎದೆ ಒಡೆದುಹೋಗುವ ವಿಷಯವೆಂದರೆ ಇದರೊಳಗೂ ಚೀನಾ ಸಂಸ್ಥೆ ಬೈಟ್ ಡ್ಯಾನ್ಸ್ ಬಂಡವಾಳವಿದೆ. ಮೊದಲ ಹಂತದಲ್ಲಿ ದೊಡ್ಡ ಪ್ರಮಾಣದ ಬಂಡವಾಳ ಹೂಡಿದ ಬೈಟ್ ಡ್ಯಾನ್ಸ್ ಎರಡನೇ ಹಂತದಲ್ಲಿ ಅಮೆರಿಕ ಸಂಸ್ಥೆಯೊಂದರ ಶೇರುಗಳನ್ನು ಕೊಂಡುಕೊಂಡಿತು. ಡೈಲಿಹಂಟ್ ಎಷ್ಟು ಪ್ರಭಾವಶಾಲಿಯಾಗಿ ಬೆಳೆದಿದೆಯೆಂದರೆ ದೇಶದ ಪುರಾತನ, ಪ್ರಬಲ ದಿನಪತ್ರಿಕೆಯೊಂದು ತಮ್ಮ ಸುದ್ದಿಗಳು ಹೆಚ್ಚು ಪ್ರಸಾರವಾಗುತ್ತಿಲ್ಲ ಎಂದು ಮುನಿಸಿಕೊಂಡು ಡೈಲಿಹಂಟ್ ನಿಂದ ಹೊರಗೆ ಬಂದಿದೆ. ಹೊರಗೆ ಬಂದಮೇಲೆ ಅದರ ಡಿಜಿಟಲ್ ರೇಟಿಂಗುಗಳು ಬಿದ್ದುಹೋದವು. ಕೊನೆಗೆ ಅದು ತಾನೇತಾನಾಗಿ ಮತ್ತೆ aggregater ಒಳಗೆ ಸೇರಿಕೊಂಡಿತು.

ವಿಷಯ ಇಷ್ಟೇ ಅಲ್ಲ, ಡೈಲಿಹಂಟ್ ಕೆಲವು ಆನ್ ಲೈನ್ ನ್ಯೂಸ್ ಪೋರ್ಟಲ್ ಗಳ ಮೇಲೆ ಬಂಡವಾಳ ಹೂಡಲು ಶುರುಮಾಡಿದೆ. ಈ ನ್ಯೂಸ್ ಅಗ್ರಿಗೇಟರ್ ಗಳಿಗೆ ಒಳಗಿನ ಅಜೆಂಡಾ ಏನಾದರೂ ಇರಬಹುದೇ? ಅಮೆರಿಕದಲ್ಲಿ ಚೀನಾ ಮೂಲದ ನ್ಯೂಸ್ ಅಗ್ರಿಗೇಟರ್ ದೊಡ್ಡ ವಿವಾದವನ್ನು ಸೃಷ್ಟಿಸಿತ್ತು.‌ ಅಂಥದ್ದು ಇಲ್ಲೂ ಆಗುವುದಿಲ್ಲ ಎಂದು ನಂಬಲಾದೀತೇ? News and Entertainment ಕ್ಷೇತ್ರದಲ್ಲಿ ಚೀನಾದ Byte Dance ಗೆ ಇರುವುದು ರಾಕ್ಷಸ ಹಸಿವು. ಭಕ್ತರು ಏನೇ ಬಾಯಿಬಡಿದುಕೊಳ್ಳಲಿ, ಚೀನಾದ ಕಂಪೆನಿಗಳು ಭಾರತದ ಎಲ್ಲ ಕ್ಷೇತ್ರಗಳಲ್ಲೂ ಬೇರುಬಿಟ್ಟಿವೆ. ಅದನ್ನು ಅಷ್ಟು ಸುಲಭವಾಗಿ ಅಲುಗಾಡಿಸುವುದು ಅಸಾಧ್ಯ.

ಮೂಲ ಲೇಖನ: ದಿನೇಶ್ ಕುಮಾರ್ ದಿನೂ

error: Content is protected !! Not allowed copy content from janadhvani.com