janadhvani

Kannada Online News Paper

ನೇಪಾಳ ಮತ್ತು ಭಾರತ ಬಾಂಧವ್ಯಕ್ಕೆ ಹುಳಿ ಹಿಂಡಿದವರು ಯಾರು…???

ನೇಪಾಳಿ ಅಂಧ ಪತ್ರಕರ್ತನೊಬ್ಬ ಭಾರತ ಸರ್ಕಾರವನ್ನು, ಭಾರತೀಯ ಮೀಡಿಯಾಗಳನ್ನು ಕಟುವಾಗಿ ಟೀಕಿಸುವ ವಿಡಿಯೋ‌ ಒಂದು ವೈರಲ್ ಆಗಿತ್ತು, ನೀವು ಅದನ್ನು ನೋಡಿರುತ್ತೀರಿ.‌ ನೇಪಾಳಿಗಳು ಇಡೀ ಭಾರತವನ್ನು ಟೀಕಿಸುತ್ತಾರೆ ಅಂತೇನು ಅಲ್ಲ,‌ ಆದರೆ 2015ರಲ್ಲಿ ನೇಪಾಳದಲ್ಲಿ ನಡೆದ ಗಲಭೆಗಳ ನಂತರ ಮೊದಲಿನ ವಿಶ್ವಾಸ ಉಳಿದಿಲ್ಲ. ನೇಪಾಳಿಗಳು ಭಾರತಕ್ಕೆ, ಭಾರತೀಯರು ನೇಪಾಳಕ್ಕೆ ಹೋಗಲು ಪಾಸ್ ಪೋರ್ಟ್ ಅವಶ್ಯಕತೆಯೂ ಇಲ್ಲ. ನೇಪಾಳದ ಪೆಟ್ರೋಲಿಯಂ ಉತ್ಪನ್ನಗಳ ಬೇಡಿಕೆಯನ್ನು ಭಾರತವೇ ಪೂರೈಸುತ್ತಿತ್ತು. ಉಳಿದಂತೆ ಬಹಳಷ್ಟು ವ್ಯಾಪಾರ,‌ ವಹಿವಾಟುಗಳಿಗೆ ಅದು ಭಾರತವನ್ನೇ ನೆಚ್ಚಿಕೊಂಡಿತ್ತು. ಅಷ್ಟು ಮಧುರವಾದ ಸಂಬಂಧಕ್ಕೆ ಹುಳಿ ಹಿಂಡಿದ್ದು ಯಾರು ಎಂಬುದೇ ಯಕ್ಷಪ್ರಶ್ನೆ.

ನೇಪಾಳದಲ್ಲಿ ರಾಜಮನೆತನ ಆಡಳಿತ ಅಂತ್ಯಗೊಂಡನಂತರ ಕಮ್ಯುನಿಸ್ಟ್ ಪಕ್ಷಗಳ ಒಕ್ಕೂಟ ಅಧಿಕಾರಕ್ಕೆ ಬಂದಿತು. ಅಲ್ಲಿ ಈಗ ಪ್ರಧಾನ ವಿರೋಧಪಕ್ಷವಾಗಿರುವ ನೇಪಾಳಿ ಕಾಂಗ್ರೆಸ್ ಕೂಡ ಸಮಾಜವಾದಿ ಧೋರಣೆಯನ್ನೇ ಹೊಂದಿದೆ. ಥೇಟ್ ನಮ್ಮ ರಾಷ್ಟ್ರೀಯ ಕಾಂಗ್ರೆಸ್ ನ ಹಾಗೆ ನಡುಪಂಥದ ರಾಜಕಾರಣ ಮಾಡುತ್ತದೆ. ಮಿಕ್ಕಂತೆ ಈಗಲೂ ರಾಜಮನೆತನದ ಆಡಳಿತವನ್ನೇ ಜಾರಿಗೆ ತರಬೇಕೆಂದು ಬಯಸುವ ಸಣ್ಣಪುಟ್ಟ ಬಲಪಂಥೀಯ ಪಕ್ಷಗಳೂ ಅಲ್ಲಿವೆ. ಆದರೆ ಅವುಗಳಿಗೆ ಜನಬೆಂಬಲವಿಲ್ಲ. 2008ರ ಮೇ 28ರಂದು ನೇಪಾಳ ತನ್ನನ್ನು ತಾನು ಸೆಕ್ಯುಲರ್ ಫೆಡರಲ್ ರಿಪಬ್ಲಿಕ್ ಎಂದು ಘೋಷಿಸಿಕೊಂಡಿತು. ಅಧಿಕೃತವಾಗಿ ಹಿಂದೂರಾಷ್ಟ್ರದ ಹಣೆಪಟ್ಟಿಯನ್ನು ಅದು ಅಂದು ಕಳೆದುಕೊಂಡಿತು. ತೀರಾ ಇತ್ತೀಚಿಗೆ ಅಂದರೆ 2015ರ ಸೆಪ್ಟೆಂಬರ್ 20ರಂದು ನೇಪಾಳ ತನ್ನ ಹೊಸ ಸಂವಿಧಾನವನ್ನು ಅಳವಡಿಸಿಕೊಂಡಿತು. ಸಂವಿಧಾನದಲ್ಲಿ ತಮಗೆ ಸರಿಯಾದ ಪ್ರಾತಿನಿಧ್ಯ ನೀಡಿಲ್ಲ ಎಂದು ಮಧೇಶಿ ಸಮುದಾಯದ ಜನರು ಬೀದಿಗೆ ಬಂದು ಗಲಭೆ ಎಬ್ಬಿಸಿದರು. ಯುನೈಟೆಡ್ ಡೆಮಾಕ್ರಾಟಿಕ್ ಮಧೇಶಿ ಫ್ರಂಟ್ (UDMF) ಹೆಸರಿನ ರಾಜಕೀಯ ಪಕ್ಷವೊಂದು ಪ್ರತಿಭಟನೆಗೆ ಕರೆ ನೀಡಿತು. ಈ ಮಧೇಶಿಗಳು ಹತ್ತೊಂಬತ್ತನೆಯ ಶತಮಾನದಲ್ಲಿ ಬಿಹಾರ, ಉತ್ತರಪ್ರದೇಶ, ಪಶ್ಚಿಮ ಬಂಗಾಳದಿಂದ ನೇಪಾಳಕ್ಕೆ ವಲಸೆ ಹೋದ ಜನರು, ಇವರಲ್ಲಿ ಹಿಂದೂ ಬ್ರಾಹ್ಮಣ, ಓಬಿಸಿ, ದಲಿತರು ಮಾತ್ರವಲ್ಲದೆ ಮುಸ್ಲಿಮರೂ ಇದ್ದಾರೆ. ಹಿಂದಿ, ಭೋಜಪುರಿ, ಮೈಥಿಲಿ ಭಾಷೆ ಮಾತನಾಡುತ್ತಾರೆ. ಮಧೇಶಿಗಳಿಗೆ ಭಾರತದ ಜತೆಗೆ ಕರುಳುಬಳ್ಳಿ ಸಂಬಂಧ. ಅಲ್ಲಿಂದ ಇಲ್ಲಿಗೆ ಹೋಗಿಬರುವುದು, ನಂಟಸ್ತಿಕೆ ಮಾಡುವುದರಿಂದ ಹಿಡಿದು ಬಿಹಾರ ಮತ್ತು ಪೂರ್ವ ಉತ್ತರ ಪ್ರದೇಶದ ರಾಜಕಾರಣದಲ್ಲೂ ಇವರು ಪ್ರಭಾವಶಾಲಿಗಳು. ಲಾಲೂ ಯಾದವ್ ರಿಂದ ಹಿಡಿದು ಸುಶೀಲ್ ಮೋದಿಯವರೆಗೆ ಎಲ್ಲರೂ ಇವರನ್ನು ಮುದ್ದು ಮಾಡಿದವರೇ. ಮಧೇಶಿಗಳ ಜತೆ ಭಾರತದ್ದು ‘ರೋಟೀ, ಬೇಟೀ ಕಾ ಸಂಬಂಧ್’ ಎಂದೇ ನಮ್ಮ ರಾಜಕಾರಣಿಗಳು ಬಣ್ಣಿಸಿದ್ದರು. ಯಾವಾಗ UDMF ಪ್ರತಿಭಟನೆಗೆ ಕರೆನೀಡಿತೋ ನೇಪಾಳದಲ್ಲಿ ಗಂಭೀರ ಸನ್ನಿವೇಶ ನಿರ್ಮಾಣವಾಯಿತು. ಭಾರತದಿಂದ ಬರುವ ಪೆಟ್ರೋಲಿಯಂ ನಿಂತುಹೋಯಿತು. ಅಗತ್ಯವಸ್ತುಗಳ ಸರಬರಾಜು ನಿಂತುಹೋಯಿತು. ನೇಪಾಳದ ರಾಜಕಾರಣಿಗಳು ಇಂಡಿಯಾದ ಮೇಲೆ ವ್ಯಗ್ಯರಾದರು. ಅಂದಿನ‌ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಇದರಲ್ಲಿ ನಮ್ಮ ಪಾತ್ರವೇನೂ ಇಲ್ಲ. ಇಂಡಿಯಾದ ಟ್ರಕ್ ಗಳನ್ನು UDMF ಪ್ರತಿಭಟನಾಕಾರರು ತಡೆದಿದ್ದಾರೆ ಎಂದು ಪದೇಪದೇ ಸ್ಪಷ್ಟೀಕರಣ ನೀಡಿದರು. ಆದರೆ ಮಧೇಶಿಗಳ ಬೆಂಬಲಕ್ಕೆ ನಿಂತು ಭಾರತ ಸರ್ಕಾರವೇ ನೇಪಾಳದ ಮೇಲೆ ಅನಧಿಕೃತ ದಿಗ್ಬಂಧನ ಹೂಡಿದೆ ಎಂದು ಪ್ರಚಾರವಾಯಿತು. ಇಂಡಿಯನ್ ಎಕ್ಸ್‌ಪ್ರೆಸ್‌ ಒಂದು ತನಿಖಾ ವರದಿ ಪ್ರಕಟಿಸಿ, ನೇಪಾಳ ತನ್ನ ಸಂವಿಧಾನದಲ್ಲಿ ಬದಲಾವಣೆ ತರಬೇಕೆಂದು ಭಾರತ ಸರ್ಕಾರ ತಾಕೀತು ಮಾಡಿದೆ ಎಂದು ಹೇಳಿತು. ಹಾಗೇನೂ ಆಗಿಲ್ಲ ಎಂದು ಭಾರತ ಸರ್ಕಾರ ಹೇಳಿದರೂ, ಇಂಡಿಯನ್ ಎಕ್ಸ್‌ಪ್ರೆಸ್‌ ತನ್ನ‌ ವರದಿಯನ್ನು ಹಿಂದಕ್ಕೆ ಪಡೆಯಲಿಲ್ಲ. ನೇಪಾಳ ಸಂವಿಧಾನದಲ್ಲಿ ಬದಲಾವಣೆ ಮಾಡುವ ಕುರಿತು ಭಾರತ ಸರ್ಕಾರ ಕಾಟ್ಮಂಡು ಜತೆ ಸಂವಹನ ನಡೆಸಿದೆ ಎಂದು ಪ್ರತಿಪಾದಿಸಿತು. ಸುಪ್ರೀಂ ಕೋರ್ಟ್ ನಿವೃತ್ತ ನಾಯಮೂರ್ತಿ ಮಾರ್ಕಂಡೇಯ ಖಟ್ಜು, ಬಿಹಾರದ ಚುನಾವಣೆಗಳ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಮಧೇಶಿಗಳನ್ನು ಬೆಂಬಲಿಸುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು. ಭಾರತ ಸಂಸತ್ತಿನಲ್ಲೂ ಕೋಲಾಹಲವಾಯಿತು, ವಿರೋಧಪಕ್ಷಗಳು, ನೇಪಾಳ ಜತೆಗಿನ ಸಂಬಂಧ ಹದಗೆಡುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿದವು.

ಇದಾದ ನಂತರ ನೇಪಾಳದಲ್ಲಿ ಚುನಾವಣೆಗಳು ನಡೆದವು. ಕಮ್ಯುನಿಸ್ಟ್ ಪಕ್ಷಗಳ ಒಕ್ಕೂಟ ದೇಶದ ಅಧಿಕಾರದ ಚುಕ್ಕಾಣಿ ಹಿಡಿಯಿತು. ಕೆ.ಪಿ.ಶರ್ಮಾ ಓಲಿ ಮೊದಲ ಬಾರಿ ಪ್ರಧಾನಿಯಾಗಿ ಆಯ್ಕೆಯಾದರು. ಹಲವು ಪಕ್ಷಗಳು ಅವರನ್ನು ಬೆಂಬಲಿಸಿದವು. UDMF ಹೀನಾಯವಾಗಿ ಸೋಲನ್ನುಂಡಿತು. ಮಧೇಶಿಗಳದ್ದೇ ಆದ ಮಧೇಶಿ ಜನ ಅಧಿಕಾರ್ ಫೋರಂ ಹೆಸರಿನ (MJAF) ಇನ್ನೊಂದು ಪಕ್ಷ ಪ್ರವರ್ಧಮಾನಕ್ಕೆ ಬಂದು, ಕೆ.ಪಿ. ಓಲಿ ಸರ್ಕಾರವನ್ನು ಬೆಂಬಲಿಸಿತು. ನೇಪಾಳದಲ್ಲಿ ಗಲಭೆ ಸೃಷ್ಟಿಸಿದ UDMF ಕೇವಲ ಮಧೇಶಿಗಳ ಮೇಲ್ವರ್ಗದ ಪ್ರಾಬಲ್ಯದ ಪಕ್ಷವಾಗಿತ್ತು, ಅದಕ್ಕೆ ಹಿಂದೂ ಓಬಿಸಿ, ದಲಿತ, ಮುಸ್ಲಿಮರ ಬೆಂಬಲವೇ ಇರಲಿಲ್ಲ‌. ಅದು ಈ ಚುನಾವಣೆಯಲ್ಲಿ ಸಾಬೀತಾಗಿತ್ತು. UDMF ಬೆಂಬಲಿಸಿ ಕೈಸುಟ್ಟುಕೊಂಡ ಭಾರತದ ರಾಜಕಾರಣಿಗಳು ಪೆಚ್ಚಾಗಿಹೋದರು.

ಆದರೆ ವಿಷಯ ಇಲ್ಲಿಗೆ ಮುಗಿಯಲಿಲ್ಲ. ಹೊಸ ಪ್ರಧಾನಿ ಕೆ.ಪಿ. ಓಲಿ ಭಾರತದ ಆರ್ಥಿಕ ದಿಗ್ಬಂಧನವನ್ನು ಎದುರಿಸಲು ಚೀನಾ ಮೊರೆಹೋದರು. ಚೀನಾ ಕೂಡ ಆಸಕ್ತಿಯಿಂದ ಒಪ್ಪಂದಗಳಿಗೆ ಸಹಿಹಾಕಿತು. ಪೆಟ್ರೋಲಿಯಂ ಉತ್ಪನ್ನಗಳೂ ಸೇರಿದಂತೆ ನೇಪಾಳಕ್ಕೆ ಬೇಕಾದ ಅಗತ್ಯವಸ್ತುಗಳನ್ನು ಪೂರೈಸುವುದಾಗಿ ವಾಗ್ದಾನ ಮಾಡಿತು. ನೇಪಾಳಕ್ಕೆ ಚೀನಾ ಆರ್ಥಿಕ ಸಹಾಯಗಳನ್ನೂ ಮಾಡಲು ಆರಂಭಿಸಿತು. ಇದು ಸಹಜವಾಗಿಯೇ ಭಾರತಕ್ಕೆ ಆತಂಕ ತರುವ ವಿಷಯವಾಯಿತು, ಆದರೆ ಕಾಲ ಮಿಂಚಿಹೋಗಿತ್ತು. ನೇಪಾಳಿಗಳ ದೃಷ್ಟಿಯಲ್ಲಿ ನಾವು ವಿಲನ್ ಗಳಾಗಿ ಹೋಗಿದ್ದೆವು. ಶತ್ರುವಿನ ಶತ್ರು ಮಿತ್ರ ಎಂಬಂತೆ ಚೀನಾ, ಸಂದರ್ಭದ ಲಾಭ ಪಡೆದು ನೇಪಾಳವನ್ನು ಬಿಗಿದಪ್ಪಿಕೊಂಡಿತು.

ನಂತರ ಆಶ್ಚರ್ಯಕರ ಬೆಳವಣಿಗೆಯಲ್ಲಿ ಕೆ.ಪಿ.ಓಲಿ ಸರ್ಕಾರದ ವಿರುದ್ಧ ಮಿತ್ರಪಕ್ಷಗಳಿಂದಲೇ ಅವಿಶ್ವಾಸ ಮತ ಗೊತ್ತುವಳಿ ಮಂಡನೆಯಾಗಿ ಸರ್ಕಾರ ಬಿದ್ದುಹೋಯಿತು. ಓಲಿ ಈ ಬೆಳವಣಿಗೆಗೂ ಭಾರತ ಸರ್ಕಾರದತ್ತ ಬೊಟ್ಟು ಮಾಡಿದರು. ಸರ್ಕಾರ ಬಿದ್ದಮೇಲೆ ಇನ್ನಷ್ಟು ಪ್ರಭಾವಶಾಲಿಯಾಗಿ ಬೆಳೆದರು, ಮತ್ತೆ ಅವರೇ ಪ್ರಧಾನಿಯಾದರು. ಈಗ ‘ಚೀನಾ ವೈರಸ್ಸಿಗಿಂತ ಭಾರತದ ವೈರಸ್ಸೇ ಡೇಂಜರಸ್’ ಎಂದು ಓಲಿ ನೇರವಾಗಿ ಹೇಳುವಷ್ಟು ಸಂಬಂಧ ಹಳಸಿದೆ. ನೇಪಾಳ ಹೊಸ ಭೂಪಟ ತಯಾರಿಸಿ, ಭಾರತದ ಭಾಗಗಳನ್ನು ಅದರಲ್ಲಿ ಸೇರಿಸಿದೆ. ಗಡಿಯಲ್ಲಿ ಭಾರತೀಯ ರೈತರ ಮೇಲೆ ಗುಂಡು ಹಾರಿಸಿದೆ.

ಇಷ್ಟು ಧೈರ್ಯ ಅದಕ್ಕೆ ಎಲ್ಲಿಂದ ಬಂತು ಅನ್ನೋದು ಅರ್ಥವಾಯಿತಾ? ಈ ಪೋಸ್ಟ್ ಇನ್ನೊಮ್ಮೆ ಓದಿ, ಕ್ರೋನಾಲಜಿ ಅರ್ಥ ಮಾಡಿಕೊಳ್ಳಿ. Between the lines ಓದಿಕೊಳ್ಳಲು ಪ್ರಯತ್ನಿಸಿ. ಅಂದಹಾಗೆ ನೇಪಾಳಿಗಳು ಸಾಹಸಿಗಳು, ಯುದ್ಧನಿಪುಣರು. ಬ್ರಿಟಿಷ್ ಮತ್ತು ಭಾರತ ಸೈನ್ಯದಲ್ಲಿ ಅವರ ಸಾಹಸಗಾಥೆಗಳು ನೂರಾರಿವೆ. ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲೂ ಅವರು ಹೆಸರುವಾಸಿ. ನೇಪಾಳಿಗಳು ಭಾರತ ಸರ್ಕಾರ ನೀಡುವ ಪರಮೋಚ್ಛ ಸೇನಾಪದಕ ಪರಮವೀರ ಚಕ್ರವನ್ನೂ ಪಡೆದ ಧೀರರು‌. ಗೂರ್ಖಾ ರೆಜಿಮೆಂಟ್ ಈಗಲೂ ಇದೆ. ಭಾರತಕ್ಕಾಗಿ ಬಡಿದಾಡುವಲ್ಲಿ ಯಾವಾಗಲೂ ಅದು ಮುಂಚೂಣಿಯಲ್ಲಿ ಇರುತ್ತದೆ. ಮರೆತಿದ್ದ ಮಾತು: ಜಗತ್ತಿನ ಹತ್ತು ಅತಿ ಎತ್ತರದ ಪರ್ವತಗಳಲ್ಲಿ ಎಂಟು ನೇಪಾಳದಲ್ಲೇ ಇವೆ, ಅದರಲ್ಲಿ ಮೌಂಟ್ ಎವರೆಸ್ಟ್ ಕೂಡ ಒಂದು. ಬುದ್ಧ ಹುಟ್ಟಿದ್ದು ಇದೇ ನೇಪಾಳದ ಲುಂಬಿನಿಯಲ್ಲಿ. Finally ಭಾರತದ ಬಹುಪಾಲುಜನರ ಆರಾಧ್ಯದೈವ ಪಶುಪತಿನಾಥನು ಅರ್ಥಾತ್ ಶಿವನ ನೆಲೆ ಇರುವುದೂ ಅಲ್ಲೇ.

ಮೂಲ ಲೇಖನ: ದಿನೇಶ್ ಕುಮಾರ್ ದಿನೂ