janadhvani

Kannada Online News Paper

ದುಷ್ಕರ್ಮಿಗಳಿಂದ ಹಲ್ಲೆಗೊಂಡ ಬಾಲಕನ ತಂದೆಯೊಂದಿಗೊಂದು ಸಂದರ್ಶನ.

ಸಂದರ್ಶನ: ಇಸ್ಹಾಕ್ ಸಿ.ಐ.ಫಜೀರ್

ಬಂಟ್ವಾಳ ತಾಲೂಕಿನ ಸಾಲೆತ್ತೂರು ಸಮೀಪದ ಕುಡ್ತಮುಗೇರು ನಿವಾಸಿ ಮುಹಮ್ಮದ್‌‌ ರವರ ಮಗ ಶೌಬಾನ್(16)ಎಂಬಾತನಿಗೆ ಸಾಲೆತ್ತೂರು,ಕಾಡುಮಠ ಶಾಲೆ ಮೈದಾನದಲ್ಲಿ
‘ಜೈ ಶ್ರೀರಾಂ’ ಹೇಳಲು ಬಲವಂತ ಪಡಿಸಿ,ಧರ್ಮ ನಿಂದನೆ ಮಾಡಿ,ಬಾಲಕನ ತಾಯಿಯನ್ನು ಅತ್ಯಾಚಾರ ಮಾಡಿ,ಮನೆಗೆ ನುಗ್ಗಿ ತರಿದು ಹಾಕುವುದಾಗಿ ಕೊಲೆ ಬೆದರಿಕೆ ಹಾಕಿದ ದುಷ್ಕರ್ಮಿಗಳ ತಂಡವನ್ನು ಬಂಟ್ವಾಳ ಸರ್ಕಲ್ ಇನ್ಸ್‌ಪೆಕ್ಟರ್ ಟಿ.ಡಿ.ನಾಗಾರಜ್ ಮತ್ತು
ವಿಟ್ಲ ಠಾಣಾಧಿಕಾರಿ,ಸಂಚಾರಿ ಠಾಣಾ ಸಬ್ ಇನ್ಸ್‌ಪೆಕ್ಟರ್ ರಾಜೇಶ್ ನೇತೃತ್ವದ ಪೊಲೀಸ್ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸರ ಮಿಂಚಿನ ಕಾರ್ಯಾಚರಣೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈ ಸಂಧರ್ಭದಲ್ಲಿ ಬಾಲಕನ ತಂದೆ,ಮುಹಮ್ಮದ್ ಅವರೊಯೊಂದಿಗೆ ಲೇಖಕ ಇಸ್ಹಾಕ್ ಸಿ.ಐ.ಫಜೀರ್ ನಡೆಸಿದ ಸಂದರ್ಶನದ ಆಯ್ದು ಭಾಗ..

ಇಫ :ಮಗನ ಮೇಲಿನ ಹಲ್ಲೆ ಬಗ್ಗೆ ಏನು ಹೇಳ್ತೀರಿ.?
ಮುಹಮ್ಮದ್: ಮಗ ಶೌಬಾನ್ ಯಾರ ತಂಟೆಗೂ ಹೋಗುವವನಲ್ಲ.
ಅವನಾಯಿತು ಅವನ ಪಾಡಾಯಿತು.
ಶಾಲೆಯ ಅಧ್ಯಾಪಕರು ಕೂಡ ಅವನ ಗುಣ ನಡತೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.ಆದರೆ,ಇದೊಂದು ಅನಿರೀಕ್ಷಿತ ಘಟನೆ.

ಇಫ: ಈ ಘಟನೆ ನಡೆದು ಒಂದು ತಿಂಗಳಾಯಿತೆಂಬ ಸುದ್ದಿ ಕೇಳಿ ಬರುತ್ತಿದೆ ಇದು ನಿಜವೇ.?
ಮು.:ಹೌದು.!
ರಂಜಾನ್ ತಿಂಗಳ ಮೂರು ದಿನಗಳ ಹಿಂದೆ ನಡೆದ ಘಟನೆ ಇದು.
ಆದರೆ,ಈ ಘಟನೆಯಿಂದ
ಮಗ ತುಂಬಾ ಹೆದರ್ಕೊಂಡಿದ್ದ.ಈ ಬಗ್ಗೆ ನಮಗೆ ತಿಳಿಸಲಿಲ್ಲ.
ಘಟನೆ ನಡೆದ ಮರು ದಿನ
ಮುಖದ ಮೇಲಿನ ಗಾಯ,ಕಣ್ಣಿನ ಬಳಿ ಬಾತುಕೊಂಡಿತ್ತು.
ಈ ಬಗ್ಗೆ ಕೇಳಿದಕ್ಕೆ ಮಂಚದ ಕಾಲು ತಾಗಿರುವುದಾಗಿ ಹೇಳಿದ್ದ,ತಕ್ಷಣವೇ ವೈದ್ಯಕೀಯ ಚಿಕಿತ್ಸೆ ಮಾಡಿಸಿದ್ದೇನೆ‌.

ಇಫ: ತಿಂಗಳ ಹಿಂದೆ ನಡೆದ ಘಟನೆ ಬೆಳಕಿಗೆ ಬರಲು ಯಾಕಿಷ್ಟು ತಡವಾಯಿತು.?
ಮು:ಈ ಬಗ್ಗೆ ಮಗ ಹೇಳಿರುತ್ತಿದ್ದಲ್ಲಿ ಕಾನೂನಿನ ಹಾದಿ ಹಿಡಿಯಬಹುದಿತ್ತು.
ಇದು ಯಾಕೋ ಅವರಲ್ಲಿ(ದುಷ್ಕರ್ಮಿಗಳಲ್ಲಿ) ಒಳ ಜಗಳದಿಂದ ಘಟನೆಯ ಚಿತ್ರೀಕರಣ ಕೈ ತಪ್ಪಿ ರವಾನೆಯಾಗಿದೆ.
ಇಲ್ಲದಿದ್ದಲ್ಲಿ ಇನ್ನೂ ಬೆಳಕಿಗೆ ಬರುತ್ತಿರಲಿಲ್ಲ.
ಮಗ ಹೆದರ್ಕೊಂಡೆ ಇರ ಬೇಕಾದೀತು.

ಇಫ:ನಿಮ್ಮ ಪರಿಸರದ ಮುಸ್ಲಿಮರೇತರರಲ್ಲಿ ನಿಮಗೇನಾದರೂ ಹಗೆ,ಧ್ವೇಷ ಹಾಗೇನಾದರೂ ಇತ್ತೇ.?
ಮು: ಈ ಘಟನೆ ಬಗ್ಗೆ ತಿಳಿದ ನಮ್ಮ ಸುತ್ತಮುತ್ತಲಿನ ಮುಸ್ಲಿಮೇತರು ತುಂಬಾ ದುಃಖ ವ್ಯಕ್ತ ಪಡಿಸಿದ್ದಾರೆ.
ಅವರೊಂದಿಗೆ ನಾವು ಅನ್ಯೋನ್ಯತೆಯಿಂದ ಇದ್ದೇವೆ.
ಹಗೆಯೂ ಇಲ್ಲ,ದ್ವೇಷವೂ ಇಲ್ಲ.

ಇಫ: ಈ ಘಟನೆಯ ವಿಡಿಯೋ ವೈರಲ್ ಆದ ಬಳಿಕ ತಮಗೆ ಬೆದರಿಕೆ ಕರೆ ಏನಾದರೂ ಬಂದಿದೆಯೇ.?
ಮು: ಇಲ್ಲ,ಇಲ್ಲ.
ಆದರೂ,ನನ್ನ ಪತ್ನಿ ತುಂಬಾ ಹೆದರ್ಕೊಂಡಿದ್ದಾಳೆ,ಮಾನಸಿಕವಾಗಿ ನಾನು ಕೂಡ ತುಂಬಾ ನೊಂದು ಕೊಂಡಿದ್ದೇನೆ.
ಶೌಬಾನ್ ತುಂಬಾ ದುಃಖತಪ್ತನಾಗಿದ್ದಾನೆ.
ಆತನ ಭವಿಷ್ಯದಲ್ಲಿ ಈ ಘಟನೆ ಕೆಟ್ಟ ಪರಿಣಾಮ ಬೀರದಿರಲಿ ಎಂದಷ್ಟೇ ಪ್ರಾರ್ಥಿಸುತ್ತೇನೆ.

ಇಫ: ಪೊಲೀಸರ ಸಹಕಾರ ಹೇಗಿತ್ತು.?
ಮು.: ಘಟನೆಯ ವೀಡಿಯೋ ವೈರಲ್ ಆದ ಅದೇ ದಿನ ರಾತ್ರಿ ವಿಟ್ಲ ಪೊಲೀಸ್ ಅಧಿಕಾರಿಗಳು ಮನೆಗೆ ಭೇಟಿ ಕೊಟ್ಟು ಮಾಹಿತಿ ಕಳೆ ಹಾಕಿ
ಈ ಬಗ್ಗೆ ದೂರು ದಾಖಲು ಮಾಡಲು ಹೇಳಿ ಕೊಂಡು ಹಿಂತಿರುಗಿದ್ದರು.
ನಾವು ರಾತ್ರಿ 10 ರ ಹೊತ್ತಿಗೆ ಮೆಲ್ಕಾರ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದೆವು.
ಅಷ್ಟೊತ್ತಿಗೆ ಮೂವರು ದುಷ್ಕರ್ಮಿಗಳನ್ನು ಪೊಲೀಸರು ನಮ್ಮ ಕಣ್ಣೆದುರಲ್ಲಿಯೇ ಠಾಣೆಗೆ ಕರೆ ತಂದಿದ್ದರು, ಪ್ರಮುಖ ಆರೋಪಿ ಭಜರಂಗದಳದ ಕಾರ್ಯಕರ್ತ ದಿನೇಶ ತಲೆಮರೆಸಿಕೊಂಡಿದ್ದ,ಆತನನ್ನು ಇಂದು ಶುಕ್ರವಾರ ಬಂಧಿಸಿದ್ದಾರೆ.
ಪೊಲೀಸರ ಕಾರ್ಯಾಚರಣೆಯಿಂದ ನಮಗೆ ಧೈರ್ಯ ತುಂಬಿದೆ.
ಮಗನಿಗೆ ನ್ಯಾಯ ಸಿಗುತ್ತದೆ ಎಂಬ‌ ನಿರೀಕ್ಷೆ ಕೂಡ ಇದೆ.

ಪೊಲೀಸರ ಕಾರ್ಯಾಚರಣೆ ಮೆಚ್ಚ ತಕ್ಕದು.ಇಫ: ಅಂದಹಾಗೆ ವೃತ್ತಿಯಲ್ಲಿ ಏನು ಮಾಡ್ತಿದ್ದೀರಿ.?
ಮು:ಮದ್ರಸಾ ಮುಅಲ್ಲಿಂ(ಅಧ್ಯಾಪಕ) ಆಗಿದ್ದೇನೆ.
ನಾಲ್ಕು ಜನ ಮಕ್ಕಳಲ್ಲಿ ಶೌಬಾನ್ ಕಡೆಯ ಮಗ.

ಇಫ: ಕಡೆಯದಾಗಿ ಏನು ಹೇಳ ಬಯಸುತ್ತೀರಿ.?
ಮು:ನಮ್ಮ ‌ಪರಿಸರ ಮತ ಸೌಹಾರ್ದತೆಯ ನಾಡು.
ಎಲ್ಲಾ ಧರ್ಮೀಯರು ಇಲ್ಲಿ ಅನ್ಯೋನ್ಯತೆಯಿಂದ ಬದುಕುತ್ತಿದ್ದೇವೆ‌.
ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆಯಾಗಬೇಕು.
ಇಂತಹ ಘಟನೆ ಮತ್ತೊಮ್ಮೆ ಮರುಕಳಿಸದಿರಲಿ ಎಂದು ಪ್ರಾರ್ಥಿಸುತ್ತೇನೆ‌.
ನಮ್ಮೊಂದಿಗೆ ಸಹಕರಿಸಿದ ಎಲ್ಲರಿಗೂ ನಾವು ಋಣಿಯಾಗಿದ್ದೇವೆ.
ವಿಶೇಷವಾಗಿ,ಪೊಲೀಸರ ಕಾರ್ಯಾಚರಣೆಕ್ಕೆ ಧನ್ಯವಾದ ಹೇಳಲೇಬೇಕು.

error: Content is protected !! Not allowed copy content from janadhvani.com