ರಿಯಾದ್: ಕೋವಿಡ್ ನಂತಹ ಅಸಾಮಾನ್ಯ ಸಂದರ್ಭಗಳಲ್ಲಿ ಮನೆಯಲ್ಲಿ ಈದ್ ನಮಾಝ್ ನಡೆಸಲು ಅನುಮತಿಸಲಾಗಿದೆ ಎಂದು ಸೌದಿ ಗ್ರ್ಯಾಂಡ್ ಮುಫ್ತಿ ಮತ್ತು ಉನ್ನತ ವಿದ್ವಾಂಸರ ಸಭೆಯ ಮುಖ್ಯಸ್ಥರೂ ಆದ ಶೈಖ್ ಅಬ್ದುಲ್ ಅಝೀಝ್ ಆಲ್-ಅಶೈಕ್ ಹೇಳಿದ್ದಾರೆ. ಮಸೀದಿಯಲ್ಲಿ ನಡೆಸುವ ಈದ್ ನಮಾಝಿನಂತೆ ಎರಡು ರಕಅತ್ ಅಗಿ ಮನೆಗಳಲ್ಲಿ ನಮಾಝ್ ನಿರ್ವಹಿಸಬೇಕು.
ಫಿತರ್ ಝಕಾತ್ ಅನ್ನು ಈದ್ ನಮಾಜಿನ ಮೊದಲು ಅರ್ಹರಿಗೆ ತಲುಪುವಂತೆ ಸೌದಿಯ ವಿಶ್ವಾಸಾರ್ಹ ದತ್ತಿ ಸಂಘಗಳ ಮೂಲಕ ವಿತರಿಸಬೇಕು. ಮಕ್ಕಳು ಮತ್ತು ಕುಟುಂಬದವರೊಂದಿಗೆ ಹೆಚ್ಚು ಸಮಯ ಕಳೆಯಲು ಮತ್ತು ಸಂತೋಷವನ್ನು ಹಂಚಿಕೊಳ್ಳಲು ಗ್ರ್ಯಾಂಡ್ ಮುಫ್ತಿ ಪೋಷಕರಲ್ಲಿ ವಿನಂತಿಸಿದ್ದಾರೆ.
ಹಿರಿಯ ವಿದ್ವಾಂಸ ಶೈಖ್ ಅಬ್ದುಲ್ ಸಲಾಂ ಅಬ್ದುಲ್ಲಾ ಅಲ್-ಸುಲೈಮಾನ್ ಅವರು ಕೂಡ ಈದ್ ನಮಾಝನ್ನು ಪ್ರತ್ಯೇಕವಾಗಿ ಮತ್ತು ಸಾಮೂಹಿಕವಾಗಿ ಮನೆಗಳಲ್ಲಿ ನಿರ್ವಹಿಸುವಂತೆ ತಿಳಿಸಿದ್ದಾರೆ. ಸೂರ್ಯೋದಯದ ನಂತರ ಹದಿನೈದು ಅಥವಾ ಮೂವತ್ತು ನಿಮಿಷಗಳ ಬಳಿಕ ಲುಹರ್ ನಮಾಝ್‌ನ ಸಮಯ ಪ್ರಾರಂಭಗೊಳ್ಳುವ ಸಮಯದ ಮಧ್ಯೆ ಈದ್ ನಮಾಝ್ ನಿರ್ವಹಿಸಬೇಕು.