ರಿಯಾದ್: ಸೌದಿ ಅರೇಬಿಯಾದಲ್ಲಿ 24 ಗಂಟೆಗಳಲ್ಲಿ 2,772 ಜನರಿಗೆ ಕೋವಿಡ್ ದೃಢಪಟ್ಟಿದೆ. ರವಿವಾರ ಈ ಕಾಯಿಲೆಯಿಂದಾಗಿ ಹತ್ತು ಮಂದಿ ಮೃತಪಟ್ಟಿದ್ದು, ಮರಣ ಸಂಖ್ಯೆಯು 312 ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯದ ವಕ್ತಾರ ಡಾ.ಮುಹಮ್ಮದ್ ಅಬ್ದುಲ್ ಅಲಿ ರಿಯಾದ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
2,772 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 54,752 ತಲುಪಿದೆ. ಸೌದಿ ಅರೇಬಿಯಾದಲ್ಲಿ ಕೊಲ್ಲಿ ರಾಷ್ಟ್ರಗಳಲ್ಲಿಯೇ ಅತಿ ಹೆಚ್ಚು ಕಾಯಿಲೆ ಮತ್ತು ಮರಣ ಪ್ರಮಾಣ ದಾಖಲಾದೆ. ಹೊಸತಾಗಿ 2456 ಮಂದಿ ರೋಗಮುಕ್ತಿ ಪಡೆದಿದ್ದು, ಕೋವಿಡ್‌ನಿಂದ ಚೇತರಿಸಿಕೊಂಡವರ ಒಟ್ಟು ಸಂಖ್ಯೆ 25,722 ಕ್ಕೆ ಏರಿದೆ. ಸೋಂಕಿಗೆ ಒಳಗಾದ 28,718 ಚಿಕಿತ್ಸೆಯಲ್ಲಿದ್ದು, ಅವರಲ್ಲಿ 202 ಜನರ ಸ್ಥಿತಿ ಗಂಭೀರವಾಗಿದೆ. ಅವರೆಲ್ಲರೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಕ್ಕಾ, ಮದೀನಾ, ಜಿದ್ದಾ, ರಫಾ ಮುಂತಾದೆಡೆ ಮರಣ ಹೊಂದಿದವರೆಲ್ಲರೂ ವಿದೇಶಿಯರು ಎನ್ನಲಾಗಿದೆ.
ರಿಯಾದ್‌ನಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ, ನಂತರ ಜಿದ್ದಾ ಎರಡನೇ ಸ್ಥಾನದಲ್ಲಿದೆ. ಸೌದಿ ಸರಕಾರ ಮತ್ತು ಆರೋಗ್ಯ ಇಲಾಖೆಯ ಆದೇಶವನ್ನು ಪಾಲಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ರೋಗ ಹರಡುವುದನ್ನು ತಡೆಗಟ್ಟವಲ್ಲಿ ವಿದೇಶೀಯರು ಹೆಚ್ಚು ಗಮನಹರಿಸಬೇಕಾಗಿದೆ.