ಬೆಂಗಳೂರು: ಲಾಕ್ಡೌನ್ನಿಂದಾಗಿ ಒಂದೂವರೆ ತಿಂಗಳಿಂದ ವ್ಯಾಪಾರ, ವಹಿವಾಟುಗಳಿಲ್ಲದೆ ಭಾರೀ ನಷ್ಟ ಅನುಭವಿಸಿರುವ ದೇಶದ ನಾನಾ ವರ್ಗಗಳಿಗೆ ಅನುಕೂಲ ಕಲ್ಪಿಸಲೆಂದು ಪ್ರಧಾನಿ ನರೇಂದ್ರ ಮೋದಿ ನಿನ್ನೆ ರಾತ್ರಿಯ ಭಾಷಣದಲ್ಲಿ 20 ಲಕ್ಷ ಕೋಟಿ ರೂ.ಗಳ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಆರ್ಥಿಕ ಬಿಕ್ಕಟ್ಟನ್ನು ಬಿಜೆಪಿ ರಾಜಕೀಯದ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ಪ್ರಧಾನಿ ಮೋದಿ ಘೋಷಿಸಿರುವ 20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್ ಕುರಿತು ಇಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಪೂರ್ಣ ವಿವರಣೆ ನೀಡಿದ್ದಾರೆ. ಇದರ ಬೆನ್ನಲ್ಲೇ ಟ್ವೀಟ್ ಮಾಡಿರುವ ಎಚ್.ಡಿ. ಕುಮಾರಸ್ವಾಮಿ, ಭಾರತ ಬಿಕ್ಕಟ್ಟನ್ನು ಅವಕಾಶವಾಗಿ ಪರಿವರ್ತಿಸಿಕೊಂಡಿದೆ, ಆತ್ಮ ನಿರ್ಭರ್ ಭಾರತ್ ಆಗಬೇಕು ಎಂದು ಪ್ರಧಾನಿ ಮೋದಿ ನಿನ್ನೆಯ ಭಾಷಣದಲ್ಲಿ ಹೇಳಿದ್ದರು. ಅದರಂತೆ ಬಿಕ್ಕಟ್ಟನ್ನು ಬಿಜೆಪಿ ರಾಜಕೀಯದ ಅವಕಾಶವಾಗಿಸಿಕೊಂಡಿದೆ. ಆತ್ಮ ನಿರ್ಭರ್ ಭಾರತ್ ಎಂಬ ಆಕರ್ಷಕ ಪದಗುಚ್ಛದ ಮೂಲಕ ದೇಶದ ಜನ ಸ್ವಾವಲಂಬಿಗಳಾಗಬೇಕು ಎಂದು ಹೇಳಿ ಕೇಂದ್ರ ಸರ್ಕಾರ ಅನಾಥರನ್ನಾಗಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.
ಲಾಕ್ಡೌನ್ನಿಂದ ತತ್ತರಿಸಿರುವ ಜನರನ್ನು, ರೈತರನ್ನು, ಬಡವರನ್ನು ಪಕ್ಕಕ್ಕಿಟ್ಟು, ಉದ್ಯಮಿಗಳು, ಉದ್ಯಮಗಳ ವ್ಯವಹಾರಕ್ಕೆ ಈ ರೂ. 20 ಲಕ್ಷ ಕೋಟಿ ಪ್ಯಾಕೇಜ್ ರೂಪಿಸಿರುವುದು ನಿರ್ಮಲಾ ಸೀತಾರಾಮನ್ ಅವರ ವಿವರಣೆಯಲ್ಲಿ ಸ್ಪಷ್ಟವಾಗಿದೆ. ಆದರೆ ಪ್ಯಾಕೇಜ್ನಲ್ಲಿ ತಮಗೂ ಒಂದಿಷ್ಟು ಸಿಗಬಹುದು ಎಂದು ನಿರೀಕ್ಷಿಸಿದ್ದ ಜನರ ನಿರೀಕ್ಷೆಗಳಿಗೆ ತಣ್ಣೀರೆರಚಲಾಗಿದೆ ಎಂದಿದ್ದಾರೆ.
ಕೇವಲ ಘೋಷಣೆಗಳ ಮೂಲಕ, ಕಾಲ್ಪನಿಕ ಲೆಕ್ಕಾಚಾರಗಳ ಮೂಲಕ ರೂ. 20 ಲಕ್ಷ ಕೋಟಿ ರೂ. ಪ್ಯಾಕೇಜ್ ಎಂಬ ಅರಗಿನ ಅರಮನೆ ಕಟ್ಟಿರುವ ಕೇಂದ್ರ ಸರ್ಕಾರ ಆ ಮೂಲಕ ಜನರ ದುಸ್ಥಿತಿಯನ್ನು ಗೇಲಿ ಮಾಡಿದೆ. ಈ ಘೋಷಣೆಯ ಮೂಲಕ ಅಪಾರ ಪ್ರಮಾಣದ ಪ್ರಚಾರ ಪಡೆದಿರುವ ಬಿಜೆಪಿ, ದೇಶದ ಬಿಕ್ಕಟ್ಟನ್ನು ರಾಜಕೀಯದ ಅವಕಾಶವಾಗಿ ಪರಿವರ್ತಿಸಿಕೊಂಡಿರುವುದು ಸ್ಪಷ್ಟ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.
ಕೊರೊನಾ ವೈರಸ್ ನಿಂದ ಸೃಷ್ಟಿಯಾಗಿರುವ ಬಿಕ್ಕಟ್ಟನ್ನು ಎದುರಿಸಲು ರಾಜ್ಯಗಳಿಗೆ ಕೇಂದ್ರ ಸರ್ಕಾರ ಅಗತ್ಯ ನೆರವು ನೀಡಬೇಕಿತ್ತು. ಆದರೆ ತನಿಗಿಷ್ಟ ಬಂದ ಘೋಷಣೆಗಳನ್ನು ಕೂಗಿ 20 ಲಕ್ಷ ಕೋಟಿ ಕೊಟ್ಟೆವೆಂದು ಕೇಂದ್ರ ತನ್ನ ಬೆನ್ನು ತಟ್ಟಿಕೊಳ್ಳುತ್ತಿದೆ. ರಾಜ್ಯಗಳನ್ನು ಅಕ್ಷರಶಃ ಭಿಕ್ಷಾಪಾತ್ರೆ ಹಿಡಿದು ನಿಲ್ಲುವಂತೆ ಮಾಡಿದೆ.
20 ಲಕ್ಷ ಕೋಟಿ ರೂ. ಪ್ಯಾಕೇಜ್ ಎಂಬುದು ಲಿಕ್ವಿಡಿಟಿ (ನಗದು) ಆಧಾರಿತವಲ್ಲ. ಇದರಿಂದ ಜನರಿಗೆ ಕನಿಷ್ಠ ಸಹಾಯವೂ ಆಗದು. ಇದು ಕಾಲ್ಪನಿಕ ಘೋಷಣೆಗಳು ಮಾತ್ರ. ಇದರಲ್ಲಿರುವುದು ಉದ್ಯಮ, ಉದ್ಯಮಿಗಳಷ್ಟೇ ಎಂದು ಎಚ್.ಡಿ. ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.