janadhvani

Kannada Online News Paper

ಇಂದಿನಿಂದ ಈದ್ ತನಕ 24 ಗಂಟೆಗಳ ಪೂರ್ಣ ಕರ್ಫ್ಯೂ ಜಾರಿ

ಕುವೈತ್ ಸಿಟಿ: ಕುವೈತ್‌ನಲ್ಲಿ ಪೂರ್ಣ ಸಮಯದ ಕರ್ಫ್ಯೂ ವಿಧಿಸುವ ಬಗ್ಗೆ ಸಂಪುಟ ನಿರ್ಧಾರ ಕೈಗೊಂಡಿದೆ. ಈ ನಿರ್ಬಂಧವು ಮೇ 10 ರ ರವಿವಾರ ಸಂಜೆ 4 ರಿಂದ ಜಾರಿಗೆ ಬರಲಿದ್ದು, ಮೇ 30ರ ಶನಿವಾರದ ವರೆಗೆ ನಿಯಂತ್ರಣ ಮುಂದುವರಿಯಲಿದೆ.

ಗೃಹ ಸಚಿವ ಅನಸ್ ಅಲ್-ಸಾಲಿಹ್ ಅವರು ಈ ಬಗ್ಗೆ ಮಾತನಾಡಿ, ಪೂರ್ಣ ಸಮಯದ ನಿಯಂತ್ರಣವು ಈದ್‌ವರೆಗೆ ಮುಂದುವರಿಯಲಿದೆ ಎಂದು ಹೇಳಿದ್ದಾರೆ. ಹಬ್ಬದ ನಂತರ ನಿರ್ಬಂಧಗಳನ್ನು ಕ್ರಮೇಣ ಕಡಿಮೆಗೊಳಿಸಿ, ನಂತರ ಸ್ಥಿತಿಗತಿಯು ಸಾಮಾನ್ಯ ಸ್ಥಿತಿಗೆ ಬರಲಿದೆ ಎಂದು ನಂಬಲಾಗಿದ್ದು, ಎಲ್ಲರ ಸಹಕಾರದ ನಿರೀಕ್ಷೆ ಇದೆ ಎಂದು ಗೃಹ ಸಚಿವರು ಹೇಳಿದರು.

ಪ್ರಮುಖ ನಿರ್ಬಂಧಗಳು:

  • ಸರಕಾರಿ ವಲಯದಲ್ಲಿ ತುರ್ತು ಸೇವೆಗಳು ಮಾತ್ರ ಕಾರ್ಯನಿರ್ವಹಿಸುತ್ತವೆ.
  • ಖಾಸಗಿ ವಲಯವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು.
  • ಔಷಧಾಲಯಗಳು, ಜಂಇಯ್ಯಗಳು ಮತ್ತು ರೆಸ್ಟೋರೆಂಟ್‌ಗಳಿಗೆ ಮಾತ್ರ ಡೆಲಿವರಿ ಸೇವೆ ಸೀಮಿತವಾಗಿರುತ್ತದೆ.
  • ಪತ್ರಿಕೆಗಳು ಮತ್ತು ನಿಯತಕಾಲಿಕೆಗಳ ವಿತರಣೆ ಇಲ್ಲ, ಆನ್‌ಲೈನ್ ಆವೃತ್ತಿಗಳನ್ನು ಪಡೆಯಬಹುದು.
  • ನೇರ ಸಂದರ್ಶನಗಳು ಅಥವಾ ಸುದ್ದಿ ಸಮಾವೇಶಗಳಿಗೆ ಅನುಮತಿ ಇಲ್ಲ.ವೀಡಿಯೊ ಕಾನ್ಫರೆನ್ಸಿಂಗ್ ಮಾತ್ರ ಅನುಮತಿ ನೀಡಲಾಗಿದೆ.
  • ವಸತಿ ಪ್ರದೇಶಗಳಲ್ಲಿ ಸಂಜೆ 4:30 ರಿಂದ ಸಂಜೆ 6:30 ರವರೆಗೆ ವ್ಯಾಯಾಮ ವಾಕಿಂಗ್ ಅನುಮತಿಸಲಾಗುವುದು,ಈ ಉದ್ದೇಶಕ್ಕಾಗಿ ಯಾವುದೇ ವಾಹನಗಳನ್ನು ಬಳಸಬಾರದು.
  • ಮಾಸ್ಕ್ ಧರಿಸಬೇಕು ಆರೋಗ್ಯ ಮುನ್ನೆಚ್ಚರಿಕೆಗಳೊಂದಿಗೆ ಸುರಕ್ಷಿತ ಅಂತರ ಕಾಪಾಡಬೇಕು.
  • ಆರೋಗ್ಯ, ಸುರಕ್ಷತೆ ಮತ್ತು ಸೇವಾ ಕ್ಷೇತ್ರಗಳು ಮತ್ತು ಅವುಗಳಿಗೆ ಸಂಬಂಧಿಸಿದ ಖಾಸಗಿ ವಲಯ ಮತ್ತು ಸೇವಾ ಕ್ಷೇತ್ರಗಳಿಗೆ ವಿನಾಯಿತಿ ನೀಡಲಾಗುವುದು

    ನಿಯಂತ್ರಣ ಅವಧಿಯಲ್ಲಿ ಜನರ ಮೂಲಭೂತ ಅಗತ್ಯಗಳನ್ನು ಪೂರೈಸಲು ಸೇವಾ ಸಂಘಟನೆಗಳನ್ನು ಸಜ್ಜುಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳೀಯರು ಮತ್ತು ವಿದೇಶಿಯರು ವೆಬ್‌ಸೈಟ್ ಮೂಲಕ ಅಪಾಯಿಂಟ್ಮೆಂಟ್ ಪಡಕೊಂಡು ಮತ್ತು ಕ್ಯೂಆರ್ ಕೋಡ್ ಬಳಸಿ ಖರೀದಿ ಮಾಡಬಹುದು. www.moci.shop ವೆಬ್‌ಸೈಟ್ ಇದಕ್ಕಾಗಿ ವಿಶೇಷ ವ್ಯವಸ್ಥೆಯನ್ನೂ ರೂಪಕಲ್ಪಿಸಿದೆ.

    ಎರಡು ಬಾರ್‌ಕೋಡ್‌ಗಳನ್ನು ಗ್ರಾಹಕರ ಮೊಬೈಲ್ ಫೋನ್‌ಗೆ ಕಳುಹಿಸಲಾಗುತ್ತದೆ. ಒಂದು ಕರ್ಫ್ಯೂ ಸಮಯದಲ್ಲಿ ಮನೆಯಿಂದ ಹೊರಗಡೆ ತೆರಳಲು ಮತ್ತು ಇನ್ನೊಂದು ಸೇವಾ ಸಂಘಗಳ ಅಪಾಯ್ಮೆಂಟ್‌ಗಾಗಿ ಸಜ್ಜುಗೊಳಿಸಲಾಗಿದೆ. ಸಹಕಾರಿ ಸಂಘಗಳ ಸರಹದ್ದಿನಲ್ಲಿರುವವರಿಗೆ ಮಾತ್ರ ಈ ಸೇವೆಯನ್ನು ಪಡೆಯಬಹುದು.

    ದೇಶದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಆರೋಗ್ಯ ಸಚಿವಾಲಯದ ನಿರ್ದೇಶನದ ಮೇರೆಗೆ ಕುವೈತ್‌ನಲ್ಲಿ ಪೂರ್ಣ ಸಮಯದ ಕರ್ಫ್ಯೂ ವಿಧಿಸಲು ಸರಕಾರ ನಿರ್ಧರಿಸಿದೆ. ಮೇ 10 ರ ರವಿವಾರ ಸಂಜೆ 4 ರಿಂದ ಮೇ 30 ರವರೆಗೆ ನಿಯಂತ್ರಣ ಜಾರಿಯಲ್ಲಿರಲಿದೆ. ಪ್ರಸಕ್ತ, ದೇಶದದಲ್ಲಿ ಹದಿನಾರು ಗಂಟೆಗಳು ಕರ್ಫ್ಯೂ ಜಾರಿಯಲ್ಲಿದ್ದು, ಇದನ್ನು ರವಿವಾರದಿಂದ 24 ಗಂಟೆಗಳವರೆಗೆ ವಿಸ್ತರಿಸಲಾಗಿದೆ.

    error: Content is protected !! Not allowed copy content from janadhvani.com