ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬ ಊಹಾಪೋಹಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಇವೆಲ್ಲಾ ಸುಳ್ಳು. ನಾನು ಯಾವುದೇ ಕಾಯಿಲೆಯಿಂದ ಬಳಲುತ್ತಿಲ್ಲ ಎಂದು ಅಮಿತ್ ಶಾ ಹೇಳುವ ಮೂಲಕ ತಮ್ಮ ಆರೋಗ್ಯ ಕುರಿತು ಎದಿದ್ದ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಕೊರೋನಾ ವೈರಸ್ ಹಾಗೂ ಲಾಕ್ಡೌನ್ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಇತ್ತೀಚೆಗೆ ನಡೆದ ಕ್ಯಾಬಿನೆಟ್ ಮೀಟಿಂಗ್ನಲ್ಲಿ ಅಮಿತ್ ಶಾ ಬಸವಳಿದಂತೆ ಕಂಡಿದ್ದರು. ಈ ಫೋಟೋ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದೇ ಫೋಟೋ ಹಿಡಿದು ಪತ್ರಕರ್ತರೊಬ್ಬರು ಅಮಿತ್ ಶಾಗೆ ಕ್ಯಾನ್ಸರ್ ಎಂದು ಟ್ವೀಟ್ ಮಾಡಿದ್ದರು. ಇದೀಗ ಸ್ವತಃ ಅಮಿತ್ ಶಾ ತಮ್ಮ ಆರೋಗ್ಯ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಕಳೆದ ಕೆಲದಿನಗಳಿಂದ ಆರೋಗ್ಯ ಕುರಿತು ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ತಾನು ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದ ಕಾರಣ ಸಾಮಾಜಿಕ ಜಾಲತಾಣದ ಕುರಿತು ಹೆಚ್ಚಿನ ಗಮನ ಹರಿಸಿಲ್ಲ. ಆದರೆ ಹಲವರು ಶೀಘ್ರದಲ್ಲೇ ಆರೋಗ್ಯ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತಿದ್ದರು.ಹೀಗಾಗಿ ಸ್ಪಷ್ಟನೆ ನೀಡುತ್ತಿದ್ದೇನೆ. ನನ್ನ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ. ಯಾವ ಖಾಯಿಲೆಯಿಂದಲೂ ಬಳಲುತ್ತಿಲ್ಲ. ನಾನು ಆರೋಗ್ಯವಾಗಿದ್ದೇನೆ ಎಂದು 55 ವರ್ಷದ ಅಮಿತ್ ಶಾ ಹೇಳಿದ್ದಾರೆ.
ಟ್ವೀಟ್ ಮೂಲಕ ಸ್ಪಷ್ಟನೆ ನೀಡಿರುವ ಅಮಿತ್ ಶಾ, ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ. ಹಲವರು ನನ್ನ ಸಾವಿನ ಕುರಿತು ಸಂದೇಶ ಕಳುಹಿಸಿದ್ದಾರೆ. ಗೃಹ ಸಚಿವನಾಗಿ ನನ್ನ ಮೇಲಿನ ಜವಾಬ್ದಾರಿ ಹಾಗೂ ಕರ್ತವ್ಯಗಳನ್ನು ನಿಭಾಯಿಸುತ್ತಿದ್ದೇನೆ. ಆರೋಗ್ಯದ ಕುರಿತು ಸುಳ್ಳು ಸುದ್ದಿ ಹರಡುವುದರಿಂದ ನನ್ನ ಆರೋಗ್ಯ ಮತ್ತಷ್ಚು ಉತ್ತಮವಾಗಲಿದೆ ಎಂದು ತಿರುಗೇಟು ನೀಡಿದ್ದಾರೆ.