ರಿಯಾದ್: ಕೋವಿಡ್ ಪ್ರತಿರೋಧದ ಭಾಗವಾಗಿ, ಸೌದಿಯ ಪೂರ್ವ ಪ್ರಾಂತ್ಯದ ಖತೀಫ್ ನಗರದಲ್ಲಿ ಏರ್ಪಡಿಸಲಾಗಿದ್ದ ಸಂಪೂರ್ಣ ಲಾಕ್ಡೌನ್ ಗೆ ನಾಳೆಯಿಂದ ಮುಕ್ತಿ. ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಸೌದಿಯ ಇತರಕಡೆಗಳಂತೆ ಮನೆಯಿಂದ ಹೊರಡಲು ಅನುಮತಿ ನೀಡಲಾಗಿದೆ. ಸಂಜೆ 5ರಿಂದ ಕರ್ಫ್ಯೂ ಮುಂದುವರಿಯಲಿದೆ.
ಸೌದಿ ಗೃಹ ಸಚಿವಾಲಯವು ನಿರ್ಬಂಧವನ್ನು ತೆಗೆದುಹಾಕಿದ್ದು, ನಾಳೆಯಿಂದ ಇತರರಿಗೆ ಖತೀಫ್ ನಗರವನ್ನು ಪ್ರವೇಶಿಸಲು ಮತ್ತು ನಗರದಲ್ಲಿರುವವರು ಹೊರಗೆ ಪ್ರಯಾಣಿಸಲು ಅವಕಾಶವಿದೆ.ಕೋವಿಡ್ ಮೊದಲ ಪ್ರಕರಣವನ್ನು ವರದಿ ಮಾಡಿದ ದೇಶದ ಮೊದಲ ನಗರ ಖತೀಫ್, ಇಲ್ಲಿಯೇ ಮೊದಲ ಸಂಪೂರ್ಣ ಕರ್ಫ್ಯೂ ಜಾರಿಮಾಡಲಾಗಿತ್ತು.
ಖತೀಫ್ ನಲ್ಲಿ ವರದಿಯಾಗಿದ್ದ 217 ಪ್ರಕರಣಗಳಲ್ಲಿ ಪ್ರಸ್ತುತ ಕೇವಲ 20 ಮಂದಿ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ.ಇಲ್ಲಿ ಒಬ್ಬರು ಮಾತ್ರ ಮೃತಪಟ್ಟಿದ್ದು ಸೌದಿ ಆರೋಗ್ಯ ಸಚಿವಾಲಯ ಮತ್ತು ಗೃಹ ವ್ಯವಹಾರಗಳ ಸಚಿವಾಲಯಕ್ಕೆ ಹಿರಿಮೆ ತಂದಿದೆ.