ಮಹೇಂದ್ರ ಕುಮಾರ್ ಸರ್ ಇನ್ನಿಲ್ಲವೆಂಬ ವಾರ್ತೆ ನೋಡಿದೊಡನೆ ಊಹಿಸಲೂ ಸಾಧ್ಯವಾಗಲಿಲ್ಲ. ನೇರವಾಗಿ ಅವರಿಗೆ ಕರೆ ಮಾಡುವ ಪ್ರಯತ್ನ ಮಾಡಿದೆ ಬ್ಯುಝಿ ಅಂತನೇ ಬರುತ್ತಿತ್ತು. ಮತ್ತೆ ಮತ್ತೆ ಪ್ರಯತ್ನಿಸಿದರೂ ಅತ್ತ ಕಡೆಯಿಂದ ಬ್ಯುಝಿ ಅಂತನೇ ಬರುತ್ತಿತ್ತು. ವಾಟ್ಸ್ ಅಪ್ ತೆರೆದು ಅವರ ಲಾಸ್ಟ್ ಸೀನ್ ನೋಡಿದಾಗ 5.15 ರಲ್ಲಿ ಕಾಣಿಸುತ್ತಿತ್ತು.
ಆದರೂ ನಂಬಲು ಸಾಧ್ಯವಾಗುತ್ತನೇ ಇರಲಿಲ್ಲ. ನಂತರ ಅವರ ಪಾರ್ಥಿವ ಶರೀರದ ಫೋಟೋ ಕಂಡೊಡನೆ ಮನಸ್ಸನ್ನು ನಿರ್ವಾಹವಿಲ್ಲದೆ ಒಪ್ಪಿಸಲೇಬೇಕಾಯಿತು.
ಮನುಷ್ಯನಾಗಿ ಹುಟ್ಟಿದವನಿಗೆ ಸಾವು ನಿಶ್ಚಿತ ಆದರೂ ಮಹೇಂದ್ರ ಕುಮಾರ್ ಸರ್ ಇಷ್ಟು ಬೇಗ ನಮ್ಮಿಂದ ಅಗಲಿ ಹೋಗುತ್ತಾರೆ ಅನ್ನುವುದು ಮಾತ್ರ ಗೊತ್ತೇ ಇರಲಿಲ್ಲ.
ತನ್ನ ಸಿದ್ದಾಂತದಲ್ಲೇ ಬದ್ಧರಾಗಿದ್ದುಕೊಂಡಿದ್ದರೆ ಸಾಕಿತ್ತು, ಅವರಿಂದು ಲೋಕಸಭಾ ಅಥವಾ ವಿಧಾನ ಸಭಾ ಸದಸ್ಯರಾಗಿರುತ್ತಿದ್ದರು.
ತಾನು ನಂಬಿದ ಸಿದ್ಧಾಂತ ಮನುಷ್ಯ ಕುಲಕ್ಕೆ ಮಾರಕ ಅಂತ ಅರಿವಾದೊಡನೆ ಅಲ್ಲಿಂದ ಹೊರಟು ಬಂದು ಸದೃಢ ಸಮಾಜವೊಂದರ ಸೃಷ್ಠಿಗೆ ಪಣತೊಟ್ಟು ನಿಂತವರಾಗಿದ್ದರು ಮಹೇಂದ್ರ ಕುಮಾರ್.
ಮೂರು ವಾರಗಳ ಹಿಂದೆ ನಮ್ಮ ಧ್ವನಿ ಗ್ರೂಪಿನಲ್ಲಿ ನಡೆದ ಒಂದು ಚರ್ಚೆಯ ನಂತರ ಅವರಾಗಿಯೇ ಕರೆ ಮಾಡಿದ್ದರು.
ಜಾತ್ಯಾತೀತ ಭಾರತದಲ್ಲಿ ಸೃಷ್ಟಿಯಾಗುತ್ತಿರುವ ಆತಂಕದ ಕುರಿತು ಆ ಗ್ರೂಪಿನಲ್ಲಿ ಒಂದು ಮೆಸೇಜ್ ಹಾಕಿದ್ದೆ. ಅದನ್ನು ಪ್ರಸ್ತಾಪಿಸಿ ನನ್ನ ಪರಿಚಯ ಮಾಡಿಸಿಕೊಂಡು ತುಂಬಾ ಹೊತ್ತು ಮಾತನಾಡಿದ್ದರು.
ಕರಾವಳಿಯ ಪ್ರಸಕ್ತ ಸನ್ನಿವೇಶಗಳ ಕುರಿತು ಬಹಳಷ್ಟು ಮಾತನಾಡಿದ್ದರು. ನಿಮ್ಮ ಯುವಕರಲ್ಲಿ ಕೆಲವರು ಅತಿಯಾದ ಆವೇಶಗಳಿಂದ ಬರೆಯುತ್ತಿದ್ದಾರೆ.
ಪ್ರತಿರೋಧಗಳು ಸಂಘಪರಿವಾರಕ್ಕೆ ನಿಮ್ಮನ್ನು ದಮನಿಸಲು ಇರುವ ಅಸ್ತ್ರವಾಗಿದೆ. ಅದಕ್ಕಾಗಿಯೇ ಅವರು ನಿಮ್ಮನ್ನು ಪ್ರಚೋದಿಸುತ್ತಿರುತ್ತಾರೆ. ನಿಮ್ಮ ಯುವಕರು ಅದನ್ನು ಅರ್ಥ ಮಾಡಿಕೊಳ್ಳುವುದಿಲ್ಲ ಎಂದು ಬಹಳಷ್ಟು ಬೇಸರ ವ್ಯಕ್ತಪಡಿಸಿದ್ದರು.
ಸ್ವಾಸ್ಥ್ಯ ಸಮಾಜದ ಕನಸೊಂದನ್ನು ಅವರು ಹುಟ್ಟು ಹಾಕಿದ್ದರು ಮಂಗಳೂರಲ್ಲೂ ಕೂಡ ಒಂದು ತಂಡವನ್ನು ಸಿದ್ಧಪಡಿಸಿದ್ದರು.
ಎಪ್ರಿಲ್ ತಿಂಗಳಲ್ಲಿ ಬೆಂಗಳೂರಿನಲ್ಲಿ ನಮ್ಮ ಧ್ವನಿಯ ಕಾರ್ಯಕ್ರಮವನ್ನೂ ಆಯೋಜನೆ ಮಾಡಿಕೊಂಡಿದ್ದರು. ಅದಕ್ಕೆ ನೀನು ಬರಲೇಬೇಕು ಎಂದಾಗ ಸರ್ ನನ್ನ ಮದುವೆ ಎಪ್ರಿಲ್ 15 ರಂದು ನಡೆಯಲಿದೆ ತಾವು ಬರಬೇಕು ಅಂದಾಗ ಖಂಡಿತಾ ಬರುತ್ತೇನೆ, ಬೇರೆ ಯಾರಾದರೂ ಬರ್ತಾರ ಅಂತ ಕೇಳಿದಾಗ ಯೋಗೇಶ್ ಮಾಸ್ಟರ್ ಸರ್ ಕೂಡ ಬರ್ತೇನೆ ಅಂತ ಹೇಳಿದ್ದಾರೆ ಅಂದಾಗ ನನಗೊಬ್ಬ ಜೊತೆಯಾದಂತಾಯಿತು ಖಂಡಿತಾ ಬರುತ್ತೇನೆ ಅಂತ ಹೇಳಿದ್ದರು.
ವಿಧಿಯ ಮುಂದೆ ಮನುಷ್ಯ ಎಷ್ಟೇ ಪ್ರಭಾವಶಾಲಿಯಾದರೂ ತಲೆಬಾಗಲೇಬೇಕು.
ಆದರೆ ಮಹೇಂದ್ರ ಕುಮಾರ್ ರವರ ಅಗಲುವಿಕೆ ಈ ಸಮಾಜಕ್ಕೆ ದೊಡ್ಡ ನಷ್ಟವಾಗಿದೆ.
ತಾನು ಮಾಡಿದ ತಪ್ಪು ಇತರರು ಮಾಡಬಾರದು ಅಂತೇಳಿ ಹಲವಾರು ಯುವಕರನ್ನು ಸಮಾಜ ಕಟ್ಟುವ ರೂಪದಲ್ಲಿ ಬೆಳೆಸಿಕೊಂಡಿದ್ದರು.
ಅತಿಯಾದ ಆವೇಶಗಳನ್ನು ಅವರು ಇಷ್ಟಪಡುತ್ತಿರಲಿಲ್ಲ.
ನಮ್ಮ ಧ್ವನಿಯ ಮೂಲಕ ಸಮಾಜವನ್ನು ಕಟ್ಟಬೇಕೆಂಬ ಅದಮ್ಯವಾದ ಕನಸನ್ನು ಕಂಡಿದ್ದರು. ಸಮಾಜದ ಭರವಸೆಯ ಬೆಳಕು ನಂದಿ ಹೋದರೂ, ಅವರ ಕಂಡುಕೊಂಡ ಕನಸುಗಳು ಇಲ್ಲಿ ಸಾಯಬಾರದು.
ಜಾತ್ಯಾತೀತ ಸಮಾಜದಲ್ಲಿ ಅವರು ಬಿತ್ತಿದ ಕನಸುಗಳು ಇನ್ನಷ್ಟು ಮೊಳಕೆಯೊಡೆಯುತ್ತಿರಲಿ.
ರಿಯಲಿ ಮಿಸ್ಸ್ ಯೂ ಸರ್ .
ಸ್ನೇಹಜೀವಿ ಅಡ್ಕ