ನವದೆಹಲಿ,ಏ.13: ವಿಶ್ವಾದ್ಯಂತ ಕೊರೋನಾ ಅಟ್ಟಹಾಸ ಮುಂದುವರಿದಿದೆ. ಇಡೀ ವಿಶ್ವದಲ್ಲಿ 18.5 ಲಕ್ಷ ಜನರಿಗೆ ಕೊರೋನಾ ಅಂಟಿದೆ. ಈ ಮಹಾಮಾರಿ ವೈರಸ್ನಿಂದ 1.14 ಲಕ್ಷ ಮಂದಿ ಅಸುನೀಗಿದ್ದಾರೆ. ಹೀಗಾಗಿ ಕೊರೋನಾ ಅಟ್ಟಹಾಸ ಸದ್ಯದ ಮಟ್ಟಿಗಂತೂ ನಿಯಂತ್ರಣಕ್ಕೆ ಬರುವ ಲಕ್ಷಣ ಗೋಚರವಾಗುತ್ತಿಲ್ಲ.
ವಿಶ್ವದ ಮುಂದುವರಿದ ರಾಷ್ಟ್ರಗಳ ಸಾಲಿನಲ್ಲಿ ಮೊದಲಿರುವ ಅಮೆರಿಕಕ್ಕೆ ಕೊರೋನಾ ವೈರಸ್ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಈಗಾಗಲೇ ಅಮೆರಿಕದಲ್ಲಿ 22 ಸಾವಿರ ಜನರು ಕೊರೋನಾದಿಂದ ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ 5.60 ಲಕ್ಷ ದಾಟಿದೆ. ಅತಿ ಜನ ನಿಬಿಡ ನಗರಗಳಾದ ನ್ಯೂಯಾರ್ಕ್ ಸೇರಿ ಹಲವು ಕಡೆಗಳಲ್ಲಿ ಕೊರೋನಾ ಕಾಣಿಸಿಕೊಂಡಿದ್ದು, ಹೀಗಾಗಿ ಈ ವೈರಸ್ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ.
ಸ್ಪೇನ್ ಕೂಡ ಈ ಭೀಕರ ವೈರಸ್ ದಾಳಿಗೆ ತತ್ತರಿಸಿದೆ. 1.66 ಲಕ್ಷ ಜನರಲ್ಲಿ ಕೊರೋನಾ ಸೋಂಕು ಇದೆ. 17 ಸಾವಿರ ಮಂದಿ ಸತ್ತಿದ್ದಾರೆ. ಇಟಲಿಯಲ್ಲಿ 15 ಲಕ್ಷ ಜನರಿಗೆ ಸೋಂಕು ಅಂಟಿದ್ದು, ಸಾವಿನ ಸಂಖ್ಯೆ 20 ಸಾವಿರದ ಗಡಿ ತಲುಪಿದೆ. ಫ್ರಾನ್ಸ್, ಜರ್ಮನಿ ಕೂಡ ಈ ವೈರಸ್ಗೆ ನಲುಗಿವೆ.
ವಿನಾಶಕಾರಿ ಕೊರೊನಾ ವೈರಸ್ ಕಾಟ ದೇಶದಾದ್ಯಂತ ದಿನೇ ದಿನೇ ಹೆಚ್ಚಾಗುತ್ತಿದೆ. ಕಿಲ್ಲರ್ ಕೊರೊನಾ ಈವರೆಗೆ 330 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದ್ದು, ಸುಮಾರು 9,200 ಮಂದಿ ಸೋಂಕಿನಿಂದ ನರಳುತ್ತಿದ್ದಾರೆ. ಕಳೆದ 24 ತಾಸುಗಳಲ್ಲಿ 38 ಸಾವುಗಳು ಸಂಭವಿಸಿದೆ. ಪಾಸಿಟಿವ್ ಪ್ರಕರಣಗಳು ಸಹ ಆತಂಕಕಾರಿ ಮಟ್ಟದಲ್ಲಿ ವೃದ್ಧಿಸುತ್ತಿದೆ.
ಇಂದು ಬೆಳಗ್ಗೆ ಕೂಡ ಕೆಲವರನ್ನು ಕೊರೊನಾ ಹೆಮ್ಮಾರಿ ಬಲಿತೆಗೆದುಕೊಂಡಿದೆ. ಅಲ್ಲದೆ, ಸೋಂಕಿತರ ಸಂಖ್ಯೆಯೂ ಕಳವಳಕಾರಿ ಮಟ್ಟದಲ್ಲಿ ಏರಿಕೆಯಾಗುತ್ತಿದೆ.
ಇಂದು ಗುಜರಾತ್, ಮಹಾರಾಷ್ಟ್ರ ಸೇರಿದಂತೆ ಕೆಲವೆಡೆ ಸಾವು ಸಂಭವಿಸಿವೆ. ಅಲ್ಲದೆ, ಸೋಂಕಿತರ ಸಂಖ್ಯೆಯೂ ನಿಮಿಷ ನಿಮಿಷಕ್ಕೂ ಹೆಚ್ಚಾಗುತ್ತಿದೆ.
ಗುಜರಾತ್ನಲ್ಲಿ ಮತ್ತೆ ಇಬ್ಬರು ಕಿಲ್ಲರ್ ವೈರಸ್ಗೆ ಬಲಿಯಾಗಿದ್ದು, ರಾಜ್ಯದಲ್ಲಿ ಮೃತರ ಸಂಖ್ಯೆ 26ಕ್ಕೇರಿದೆ. ಅಲ್ಲದೆ, ಕಳೆದ 12 ಗಂಟೆಗಳ ಅವಧಿಯಲ್ಲಿ ಮತ್ತೆ 22 ಸೋಂಕು ಪ್ರಕರಣಗಳು ದಾಖಲಾಗಿದ್ದು, ಬಾಧಿತರ ಸಂಖ್ಯೆ 528ಕ್ಕೇರಿದೆ. ಮಹಾರಾಷ್ಟ್ರದಲ್ಲಿ ಮತ್ತೆ ಸಾವು ಮತ್ತು ಹೊಸ ಪ್ರಕರಣಗಳು ಪತ್ತೆಯಾಗಿವೆ.
ಜಗತ್ತಿನ ಅತಿದೊಡ್ಡ ಕೊಳಗೇರಿ ಪ್ರದೇಶವೆಂದೇ ಕುಖ್ಯಾತಿ ಪಡೆದಿರುವ ಧಾರವಿ ಸ್ಲಂ ಕೊರೊನಾ ವೈರಸ್ನ ಹಾಟ್ಸ್ಪಾಟ್ ಆಗುತ್ತಿದೆ. ಅಲ್ಲಿ ಮತ್ತೊಬ್ಬ ವ್ಯಕ್ತಿ ಸೋಂಕಿನಿಂದ ಸಾವಿಗೀಡಾಗಿದ್ದು, ಈವರೆಗೆ ಐವರು ಬಲಿಯಾಗಿದ್ದಾರೆ. ಅಲ್ಲಿ ಮತ್ತೆ ನಾಲ್ಕು ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಸಾವು ಮತ್ತು ಸೋಂಕು ಪ್ರಕರಣದಲ್ಲಿ ಮಹಾರಾಷ್ಟ್ರ ದೇಶದಲ್ಲೇ ಅಗ್ರಸ್ಥಾನದಲ್ಲಿದ್ದು, ರಾಜಧಾನಿ ದೆಹಲಿ ಎರಡನೆ ಸ್ಥಾನದಲ್ಲಿದೆ.
ರಾಜಸ್ಥಾನದಲ್ಲಿ ಸೋಂಕು ಪ್ರಕರಣ ಹೆಚ್ಚಳ ಯಥಾಸ್ಥಿತಿಯಲ್ಲಿಯೇ ಮುಂದುವರಿದಿದೆ. ಇಂದು ಮತ್ತೆ 11 ಜನರಲ್ಲಿ ಪಾಸಿಟಿವ್ ಕೇಸ್ಗಳು ದೃಢಪಟ್ಟಿದ್ದು, ಬಾಧಿತರ ಸಂಖ್ಯೆ 815ಕ್ಕೇರಿದೆ. ಅಲ್ಲಿ ಈವರೆಗೆ 11 ರೋಗಿಗಳು ಅಸುನೀಗಿದ್ದಾರೆ. ಜಾರ್ಖಂಡ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿಯೂ ಹೊಸ ಸೋಂಕು ಪ್ರಕರಣಗಳು ದಾಖಲಾಗುತ್ತಲೇ ಇವೆ.
ಈಶಾನ್ಯ ರಾಜ್ಯ ನಾಗಾಲ್ಯಾಂಡ್ನಲ್ಲಿ ಇದೇ ಮೊದಲ ಬಾರಿಗೆ ಕೋವಿಡ್-19 ಪಾಸಿಟಿವ್ ಪ್ರಕರಣ ವರದಿಯಾಗಿದೆ. ಕೇಂದ್ರ ಸರ್ಕಾರ ವಿಧಿಸಿರುವ ಲಾಕ್ಡೌನ್ ಅವಧಿ ನಾಳೆ ಕೊನೆಗೊಳ್ಳಲಿದೆ. ಕಿಲ್ಲರ್ ಕೊರೊನಾ ಕಂಟಕ ಮತ್ತಷ್ಟು ತೀವ್ರವಾಗುತ್ತಿದ್ದು, ಎರಡನೆ ಹಂತದ ಲಾಕ್ಡೌನ್ ಏ.30ವರೆಗೂ ವಿಸ್ತರಣೆಯಾಗಲಿದ್ದು, ಇಂದು ಅಧಿಕೃತ ಘೋಷಣೆ ಹೊರಬೀಳಲಿದೆ.






