janadhvani

Kannada Online News Paper

ಬೆಂಗಳೂರು: ಲಾಕ್​ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರ ಅಗತ್ಯ ಸೇವೆಯಲ್ಲಿ ತೊಡಗಿರುವವರಿಗೆ ಆನ್​ಲೈನ್ ಮೂಲಕವೇ ಪಾಸ್ ವಿತರಿಸಲು ಪೊಲೀಸ್ ಇಲಾಖೆ ಮುಂದಾಗಿದೆ.ಕರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಗೃಹ ಬಂಧನದಲ್ಲಿರುವ (ಕ್ವಾರಂಟೈನ್) ವ್ಯಕ್ತಿಗಳು ಅನಗತ್ಯವಾಗಿ ಹೊರಗಡೆ ಓಡಾಡುತ್ತಿದ್ದಾರೆ. ಇದರಿಂದ ಮತ್ತಷ್ಟು ಜನರಿಗೆ ಸೋಂಕು ತಗುಲುವ ಭೀತಿಯಿಂದ ಮಾ.25ರಿಂದ ದೇಶದಾದ್ಯಂತ ಸಂಪೂರ್ಣ ಲಾಕ್​ಡೌನ್ ಮಾಡಲಾಗಿದೆ. ಆದಾಗ್ಯೂ ತುರ್ತು ಸೇವೆ ನೆಪದಲ್ಲಿ ಓಡಾಡುವುದನ್ನು ಜನ ಮುಂದುವರಿಸಿದ್ದಾರೆ.

ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನಗರ ಪೊಲೀಸರು ಅಗತ್ಯತೆ ಇರುವರಿಗೆೆ ಪಾಸ್ ವ್ಯವಸ್ಥೆ ಜಾರಿಗೊಳಿಸಿದ್ದರು. ನಗರದ ಎಲ್ಲ ವಿಭಾಗದ ಡಿಸಿಪಿ ಕಚೇರಿಯಲ್ಲಿ ಪಾಸ್ ವಿತರಣೆ ಪ್ರಕ್ರಿಯೆ ಶುರುವಾಗಿತ್ತು. ಆದರೆ, ಜನರು ಪಾಸ್​ಗಾಗಿ ಮುಗಿಬಿದ್ದಿದ್ದರು. ಅಂತರ ಕಾಯ್ದುಕೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಆನ್​ಲೈನ್ ಮೂಲಕ ಪಾಸ್ ವಿತರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ‘ಮೈ ಗೇಟ್’ ಆಪ್ ಮೂಲಕ ಭಾನುವಾರ (ಮಾ.29) ನೋಂದಣಿ ಆರಂಭವಾಗಿದೆ.

ಸರಕು ಸಾಗಣೆ ವಾಹನಕ್ಕೆ ಪಾಸ್ ಬೇಡ: ರಾಜ್ಯದಲ್ಲಿ ಸಂಚಾರ ನಡೆಸುವ ಸರಕು ಸಾಗಣೆ ವಾಹನಗಳಿಗೆ ಪೊಲೀಸ್ ಇಲಾಖೆ ಪಾಸ್ ಅಗತ್ಯ ಇಲ್ಲ. ವಾಹನ ಸರಕು ಸಾಗಣೆ ಎಂದು ನೋಂದಣಿ ಆಗಿರಬೇಕು. ಅದರಲ್ಲಿ ಚಾಲಕ ಮತ್ತು ಕ್ಲೀನರ್ ಮಾತ್ರ ಇರಬೇಕು. ಬೇರೆ ಯಾರಾದರೂ ಇದ್ದರೇ ಅಂತಹವರಿಗೆ ಪಾಸ್ ಕಡ್ಡಾಯ. ಹಾಲಿನ ವಾಹನಗಳಿಗೂ ಪಾಸ್ ಅಗತ್ಯವಿಲ್ಲ ಎಂದು ಸರಕು ಸಾಗಣೆ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಸರ್ಕಾರ ನೇಮಿಸಿರುವ ನೋಡಲ್ ಅಧಿಕಾರಿ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.

ಯಾರು ಪಾಸ್ ಪಡೆಯಲು ಅರ್ಹರು?: ತುರ್ತು ಸೇವಾ ಸಿಬ್ಬಂದಿ, ಔಷಧ, ತರಕಾರಿ, ಆಹಾರ ಪದಾರ್ಥಗಳ ವಿತರಕರು ಹಾಗೂ ಮಾಧ್ಯಮದವರನ್ನು ಅಗತ್ಯ ಸೇವೆಗಳ ವ್ಯಾಪ್ತಿಗೆ ಸೇರಿಸಲಾಗಿದೆ. ಇವರೆಲ್ಲರೂ ಪಾಸ್ ಪಡೆಯಬಹುದಾಗಿದ್ದು, ಆನ್​ಲೈನ್​ನಲ್ಲಿ ಅಗತ್ಯ ದಾಖಲಾತಿಗಳನ್ನು ಸಲ್ಲಿಸಬೇಕು.error: Content is protected !! Not allowed copy content from janadhvani.com