ನವದೆಹಲಿ: ವಿಶ್ವಾದ್ಯಂತ ಭೀಕರವಾಗಿ ಹರಡುತ್ತಿರುವ ಕೊರೋನಾ ವೈರಸ್ ವಿರುದ್ಧ ಭಾರತವೂ ಒಂದಾಗಿ ಹೋರಾಡುತ್ತಿದೆ.ಇಂತಹಾ ಸಂಕಷ್ಟದ ಸಮಯದಲ್ಲೂ ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ ಸಮಾಜದಲ್ಲಿ ಆತಂಕ ಹೆಚ್ಚಿಸುವವರ ವಿರುದ್ಧ ಎಚ್ಚರಿಕೆಯಿಂದ ಇರಬೇಕಾದ ಅನಿವಾರ್ಯತೆ ಎದುರಾಗಿದೆ.
ಅದರಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮಾರಕ ಕೊರೊನಾ ವೈರಸ್ ತಗುಲಿದೆ ಎಂಬ ಸುಳ್ಳು ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಕುರಿತಾದ ಸುದ್ದಿವಾಹಿನಿಯೊಂದರ ತಿರುಚಿದ ಫೋಟೋವೊಂದು ಭಾರೀ ವೈರಲ್ ಆಗಿದೆ.
ಸುದ್ದಿಯ ಸ್ಕ್ರೀನ್ ಶಾಟ್ ಎನ್ನಲಾದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರಲ್ಲಿ ಕೇಂದ್ರ ಗೃಹ ಸಚಿವ
ಅಮಿತ್ ಶಾ ಅವರಿಗೆ ಮಾರಕ ಕೊರೊನಾ ವೈರಸ್ ತಗುಲಿದೆ ಎಂದು ಹೇಳಲಾಗಿದೆ. ಈ ಫೋಟೋ ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇಟಲಿಗೆ ಪ್ರವಾಸ ತೆರಳಿದ್ದ ಅಮಿತ್ ಶಾ ಅವರಿಗೆ ಕೊರೊನಾ ತಗುಲಿದೆ ಎಂದು ಹಬ್ಬಿಸಲಾಗಿದೆ.
ಇದು ತಿರುಚಿದ ಫೋಟೋ ಎಂಬುದು ಸ್ಪಷ್ಟವಾಗಿದ್ದು, ಅಮಿತ್ ಶಾ ಅವರಿಗೆ ಕೊರೊನಾ ವೈರಸ್ ತಗುಲಿಲ್ಲ. ಅಲ್ಲದೇ ಅವರು ಯಾವುದೇ ಪರೀಕ್ಷೆಗೂ ಒಳಗಾಗಿಲ್ಲ ಎಂಬುದು ಸ್ಪಷ್ಟವಾಗಿದ್ದು, ಅವರ ಇಟಲಿ ಪ್ರಯಾಣ ಕೂಡ ಸುಳ್ಳಿನ ಕಂತೆ ಎಂಬುದು ಸಾಬೀತಾಗಿದೆ.
ನಡದದ್ದೇನು?
‘ಬ್ರೇಕ್ ಯುವರ್ ಓನ್ ನ್ಯೂಸ್’ ಎಂಬ ವೆಬ್ಸೈಟ್ವೊಂದು ಯಾವುದೇ ಫೋಟೋ ಬಳಿಸಿ ಸುದ್ದಿಗಳನ್ನು ಅಪ್ಲೋಡ್ ಮಾಡುವುದಕ್ಕೆ ಎಲ್ಲರಿಗೂ ಅವಕಾಶ ನೀಡುತ್ತದೆ. ಇದನ್ನೇ ದುರುಪಯೋಗಪಡಿಸಿಕೊಂಡ ದುರುಳರು ‘ಆಜ್ ತಕ್’ ಸುದ್ದಿವಾಹಿನಿಯ ಹಳೆಯ ಸುದ್ದಿಯೊಂದರ ಫೋಟೋ ಬಳಸಿ ಅಮಿತ್ ಶಾ ಅವರಿಗೆ ಕೊರೊನಾ ವೈರಸ್ ತಗುಲಿದ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ.
ನಿಜಾಂಶ:
ಟೈಮ್ಸ್ ಫ್ಯಾಕ್ಟ್ ಚೆಕ್ ತಂಡ ಅಮಿತ್ ಶಾ ಅವರಿಗೆ ಕೊರೊನಾ ತಗುಲಿದೆ ಎಂಬ ಸುದ್ದಿಯನ್ನು ವದಂತಿ ಎಂದು ದೃಢೀಕರಿಸಿದ್ದು, ಕೇಂದ್ರ ಗೃಹ ಸಚಿವರು ಸಂಪೂರ್ಣ ಆರೋಗ್ಯವಾಗಿದ್ದಾರೆ ಎಂಬುದನ್ನು ಖಚಿತಪಡಿಸಿದೆ.