ರಿಯಾದ್: ಸೌದಿಯಲ್ಲಿ ಅಗತ್ಯ ವಸ್ತುಗಳನ್ನು ಸಂಗ್ರಹಣೆ ಮಾಡುವುದು ಮತ್ತು ಅವುಗಳ ಬೆಲೆಗಳನ್ನು ಹೆಚ್ಚಿಸುವುದು ಶಿಕ್ಷಾರ್ಹ ಅಪರಾಧ ಎಂದು ಸಾರ್ವಜನಿಕ ಅಭಿಯೋಜನೆ ಎಚ್ಚರಿಸಿದೆ.
ಸಾರ್ವಜನಿಕರಿಗೆ ಅಗತ್ಯ ವಸ್ತುಗಳು ಮತ್ತು ಸೇವೆಗಳನ್ನು ಯಥಾವತ್ತಾಗಿ ಒದಗಿಸಬೇಕು ಎಂದು ಪಬ್ಲಿಕ್ ಪ್ರಾಸಿಕ್ಯೂಷನ್ ತಿಳಿಸಿದೆ. ಕಾನೂನು ಉಲ್ಲಂಘಿಸುವವರಿಗೆ 1 ಕೋಟಿ ರಿಯಾಲ್ ವರೆಗೆ ದಂಡ ವಿಧಿಸಲಾಗುತ್ತದೆ.
ಈ ಕ್ರಮವು ಕೈಗಾರಿಕೆ, ಕೃಷಿ ಉತ್ಪನ್ನಗಳು ಮತ್ತು ಸೇವೆಗಳಿಗೆ ಸಂಬಂಧಿಸಿದ ಎಲ್ಲಾ ಕ್ಷೇತ್ರಗಳಿಗೆ ಅನ್ವಯಿಸುತ್ತದೆ. ಕಾನೂನು ಉಲ್ಲಂಘಿಸುವ ಅಥವಾ ಅನಗತ್ಯ ಸ್ಪರ್ಧೆಯನ್ನು ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಅಸಾಮಾನ್ಯ ಸಂದರ್ಭಗಳು ಅಥವಾ ಜಾಗತಿಕ ಘಟನೆಗಳ ಹಿನ್ನೆಲೆಯಲ್ಲಿ ಬೆಲೆಗಳನ್ನು ಹೆಚ್ಚಿಸುವುದು ಅಥವಾ ಕಡಿಮೆ ಮಾಡುವುದು ಗಂಭೀರ ಅಪರಾಧ. ಕೋವಿಡ್ 19 ಹಿನ್ನೆಲೆಯಲ್ಲಿ ಸ್ಯಾನಿಟೈಜರ್ ಮತ್ತು ಫೇಸ್ ಮಾಸ್ಕ್‌ಗಳಂತಹ ವೈದ್ಯಕೀಯ ಸಾಧನಗಳಿಗೆ ಬೇಡಿಕೆ ಹೆಚ್ಚುತ್ತಿದೆ.
ಆದರೆ ಅವುಗಳ ಬೆಲೆಗಳಲ್ಲಿ ಅಭೂತಪೂರ್ವ ಹೆಚ್ಚಳವನ್ನು ಗಮನಿಸಲಾಗಿದೆ ಅಥವಾ ಕೊರತೆ ಸೃಷ್ಟಿಸಲು ಅವುಗಳನ್ನು ಸಂಗ್ರಹಿಸುತ್ತಿರುವುದಾಗಿ ಕಂಡು ಬಂದ ಹಿನ್ನೆಲೆಯಲ್ಲಿ ಪಬ್ಲಿಕ್ ಪ್ರೋಸಿಕ್ಯೂಷನ್ ಎಚ್ಚರಿಸಿದೆ. ಮಾರುಕಟ್ಟೆಯನ್ನು ದುರ್ಬಲ ಗೊಳಿಸಲು ನಿಜವಾದ ದರಕ್ಕಿಂತ ಕಡಿಮೆದರದಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುವುದು ಅಥವಾ ಸೇವೆಗಳನ್ನು ನೀಡುವುದು ಕ್ರಿಮಿನಲ್ ಅಪರಾಧವಾಗಿದೆ.