janadhvani

Kannada Online News Paper

ಕೊರೋನಾ ಭೀತಿ: ಭಾರತ ಸೇರಿದಂತೆ ಏಳು ದೇಶಗಳ ವಿಮಾನ ಸೇವೆಗೆ ತಾತ್ಕಾಲಿಕ ನಿಷೇಧ

ಕುವೈತ್ ಸಿಟಿ: ಭಾರತ ಸೇರಿದಂತೆ ಏಳು ದೇಶಗಳಿಂದ ಮತ್ತು ಆ ದೇಶಗಳಿಗೆ ವಿಮಾನ ಸೇವೆಯನ್ನು  ಕುವೈತ್ ನಿಷೇಧಿಸಿದೆ. ಕೋವಿಡ್ 19 ಅನ್ನು ತಡೆಗಟ್ಟುವುದರ ಭಾಗವಾಗಿ ಒಂದು ವಾರ ಈ ನಿಷೇಧವನ್ನು ಹೇರಲಾಗಿದ್ದು, ಮಂತ್ರಿಮಂಡಲದ ನಿರ್ದೇಶನದ ಮೇರೆಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯವು ಈ ನಿರ್ಧಾರವನ್ನು ಕೈಗೊಂಡಿದೆ.

ಭಾರತೀಯರನ್ನು ಹೊರತುಪಡಿಸಿ, ಶ್ರೀಲಂಕಾ, ಬಾಂಗ್ಲಾದೇಶ, ಫಿಲಿಪೈನ್ಸ್, ಲೆಬನಾನ್, ಈಜಿಪ್ಟ್ ಮತ್ತು ಸಿರಿಯಾದ ಪ್ರಯಾಣಿಕರನ್ನು ನಿಷೇಧಿಸಲಾಗಿದೆ. ಕಳೆದ 14 ದಿನಗಳಲ್ಲಿ ಈ ಮೇಲೆ ವಿವರಿಸಿದ ದೇಶಗಳಿಗೆ ಸಂದರ್ಶನ ನೀಡಿದ ಇತರ ದೇಶಗಳ ನಾಗರಿಕರಿಗೂ ಕುವೈತ್‌ಗೆ ಪ್ರವೇಶಿಸಲು ಅವಕಾಶವಿರುವುದಿಲ್ಲ.

ಅನಿರೀಕ್ಷಿತ ನಿರ್ಧಾರದಿಂದ ಅನೇಕ ಪ್ರಯಾಣಿಕರ ಮೇಲೆ ಪರಿಣಾಮ ಬೀರಿದ್ದು, ಕುವೈತ್‌ಗೆ ಸಂಪರ್ಕ ವಿಮಾನಗಳನ್ನು ಹತ್ತಿದ ಪ್ರಯಾಣಿಕರು ಖತರ್, ಅಬುಧಾಬಿ, ದುಬೈ ವಿಮಾನ ನಿಲ್ದಾಣಗಳಲ್ಲಿ ಸಿಲುಕಿಕೊಂಡಿದ್ದಾರೆ. ಅವರನ್ನು ಊರಿಗೆ ಕಳುಹಿಸಲಾಗುವುದು ಎಂದು ವಿಮಾನ ಕಂಪೆನಿಗಳು ತಿಳಿಸಿವೆ.

ಭಾರತ ಸೇರಿದಂತೆ ಹತ್ತು ದೇಶಗಳ ಪ್ರಯಾಣಿಕರು ಕೋವಿಡ್ 19ನಿಂದ ಮುಕ್ತರು ಎಂದು ಸಾಬೀತುಪಡಿಸುವ ಪ್ರಮಾಣಪತ್ರವನ್ನು ನೀಡಿದರೆ ಕುವೈತ್‌ಗೆ ಪ್ರವೇಶ ಅನುಮತಿಸಲಾಗುವುದು ಎಂದು ಡಿಜಿಸಿಎ ಈ ಹಿಂದೆ ತಿಳಿಸಿತ್ತು. ಆದರೆ, ಭಾರತ ಸೇರಿದಂತೆ ಹಲವಾರು ದೇಶಗಳು ತಪಾಸಣೆ ನಡೆಸುವಲ್ಲಿನ ತೊಂದರೆಗಳನ್ನು ತಿಳಿಸಿದ ನಂತರ ಕ್ಯಾಬಿನೆಟ್ ಈ ಪ್ರಸ್ತಾಪವನ್ನು ಸ್ಥಗಿತಗೊಳಿಸಿತ್ತು.

ಈ ಬಗ್ಗೆ ಸಂಸತ್ತು ಮಟ್ಟದಲ್ಲಿ ತೀವ್ರ ಪ್ರತಿಭಟನೆ ನಡೆದಿತ್ತು. ಶುಕ್ರವಾರ ರಾತ್ರಿ ನಡೆದ ಅಸಾಧಾರಣ ಕ್ಯಾಬಿನೆಟ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ವಿಮಾನ ನಿಲ್ದಾಣದಲ್ಲಿ ಕೋವಿಡ್ 19 ತಪಾಸಣೆಗಾಗಿ ಮೊದಲ ಆಧುನಿಕ ತಪಾಸಣೆ ವ್ಯವಸ್ಥೆಯನ್ನು ಸ್ಥಾಪಿಸುವ ಭಾಗವಾಗಿ ತಾತ್ಕಾಲಿಕವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

error: Content is protected !! Not allowed copy content from janadhvani.com