ರಿಯಾದ್: ಸೌದಿ ಅರೇಬಿಯಾಕ್ಕೆ ಭೇಟಿನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ ಎಂದು ಪ್ರವಾಸೋದ್ಯಮ ಪ್ರಾಧಿಕಾರ ತಿಳಿಸಿದೆ. ಕಳೆದ ಮೂರು ತಿಂಗಳಲ್ಲಿ ಪ್ರತೀ ದಿನ ಸುಮಾರು 3,500 ಪ್ರವಾಸಿ ವೀಸಾಗಳಂತೆ ನೀಡಲಾಗಿದೆ. 2030 ರ ವೇಳೆಗೆ 100 ಮಿಲಿಯನ್ ಪ್ರವಾಸಿಗರು ತಲುಪುವ ಯೋಜನೆಯನ್ನು ಸೌದಿ ಅರೇಬಿಯಾ ರೂಪಿಸಿದೆ.
ಕಳೆದ ವರ್ಷ ಸೆಪ್ಟೆಂಬರ್ 27 ರಂದು ಸೌದಿ ಅರೇಬಿಯಾ ಪ್ರವಾಸಿ(ಟೂರಿಸ್ಟ್) ವೀಸಾಗಳನ್ನು ನೀಡಲು ಪ್ರಾರಂಭಿಸಿದ್ದು, ಅಂದಿನಿಂದ ಪ್ರಪಂಚದಾದ್ಯಂತದಿಂದ ಪ್ರವಾಸಿಗರ ಒಳಹರಿವು ಪ್ರಾರಂಭವಾಗಿದೆ. ಪ್ರವಾಸಿಗರನ್ನು ಆಕರ್ಷಿಸಲು ದೇಶದಲ್ಲಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಪ್ರವಾಸೋದ್ಯಮವನ್ನು ದೊಡ್ಡ ಹೂಡಿಕೆ ವಲಯವನ್ನಾಗಿ ಪರಿವರ್ತಿಸುವ ಗುರಿ ಹೊಂದಿದ್ದು, ಈ ಮೂಲಕ ರಾಷ್ಟ್ರೀಯ ಆದಾಯಕ್ಕೆ 10% ಕೊಡುಗೆ ಲಭಿಸುವ ನಿರೀಕ್ಷೆಯಿದೆ.
ಕಳೆದ ಮೂರು ತಿಂಗಳಲ್ಲಿ ಮಾತ್ರ ಸೌದಿ ಸರಕಾರವು ಸುಮಾರು ಮೂರೂವರೆ ಮಿಲಿಯನ್ ಪ್ರವಾಸಿ ವೀಸಾಗಳನ್ನು ನೀಡಿದೆ. ಹೆಚ್ಚಿನ ಹೂಡಿಕೆದಾರರನ್ನು ಆಕರ್ಷಿಸಲು ಹೋಟೆಲ್‌ನ ಪರವಾನಗಿ ಕಾರ್ಯವಿಧಾನಗಳನ್ನು ಪರಿಷ್ಕರಿಸಲಾಗುವುದು ಎಂದು ಸೌದಿ ಪ್ರವಾಸೋದ್ಯಮ ಪ್ರಾಧಿಕಾರದ ಅಧ್ಯಕ್ಷ ಅಹ್ಮದ್ ಅಲ್ ಖತೀಬ್ ಹೇಳಿದ್ದಾರೆ.
ಅಮೆರಿಕ, ಬ್ರಿಟನ್ ಮತ್ತು ಷೆಂಗೆನ್ ವೀಸಾ ಹೊಂದಿರುವವರಿಗೆ ಆನ್-ಅರೈವಲ್ ಪ್ರವಾಸಿ ವೀಸಾಗಳನ್ನು ನೀಡಿರುವುದರಿಂದ ದೇಶಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ. ವಿಶ್ವ ಪ್ರವಾಸಿ ಭೂಪಟದಲ್ಲಿ ಸೌದಿಯನ್ನು ಮುಂಚೂಣಿಗೆ ತರುವುದು ಇದರ ಉದ್ದೇಶವಾಗಿದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವ ಸ್ಥಳೀಯ ಜನರಿಗೆ ಹೆಚ್ಚಿನ ತರಬೇತಿ ನೀಡಲು ಯೋಜನೆ ರೂಪಿಸಲಾಗಿದೆ ಎಂದು ಅಹ್ಮದ್ ಅಲ್-ಖತೀಬ್ ಹೇಳಿದ್ದಾರೆ.