janadhvani

Kannada Online News Paper

CAA ತೀರ್ಪು ನೀಡಲು ಸುಪ್ರೀಮ್ ನಕಾರ: ಪ್ರತಿಭಟನೆ ಅನಿವಾರ್ಯ- ಇಂಡಿಯನ್ ಗ್ರ್ಯಾಂಡ್ ಮುಫ್ತಿ

ಕಲ್ಲಿಕೋಟೆ, ಜ.22: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹೋರಾಟ ಮುಂದುವರಿಸುವುದು ಅನಿವಾರ್ಯ ಎಂದು ಭಾರತೀಯ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಹೇಳಿದ್ದಾರೆ. ಪೌರತ್ವ ಕಾಯ್ದೆ ಕುರಿತ ತೀರ್ಮಾನವನ್ನು ವಿಳಂಬಗೊಳಿಸುವ ಅಗತ್ಯವಿರಲಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆಯು ಭಾರತದ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಎಲ್ಲಾ ಅರ್ಜಿಗಳಲ್ಲೂ ಉಲ್ಲೇಖಿಸಲಾಗಿದೆ.

ಹೀಗಿರುವಾಗ ನಾಲ್ಕು ವಾರಗಳ ವಿಸ್ತರಣೆಯನ್ನು ನ್ಯಾಯಾಲಯ ಏಕೆ ನೀಡಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ತೀರ್ಮಾನ ವಿಳಂಬವಾಗುತ್ತಿದ್ದಂತೆ, ಹೆಚ್ಚಿನ ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಕೆಯಾಗಲಿದೆ. ನಾಲ್ಕು ವಾರಗಳಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡುವ ನಿರೀಕ್ಷೆಯಿದೆ ಎಂದರು.

ನ್ಯಾಯಾಲಯದಲ್ಲಿ ಉತ್ತಮ ಭರವಸೆ ಇದೆ. ನ್ಯಾಯಾಲಯವು ಭಾರತದಲ್ಲಿ ವಿಭಜನೆಯನ್ನು ಸೃಷ್ಟಿಸುವುದಿಲ್ಲ ಎಂಬ ನಂಬಿಕೆಯಿದೆ. ಈ ಕಾನೂನಿಂದ ಮುಸ್ಲಿಮರಿಗೆ ಮಾತ್ರ ಸಮಸ್ಯೆಯಲ್ಲ. ದೇಶದ 75% ಜನರು ಕಾನೂನಿಗೆ ವಿರುದ್ಧವಾಗಿದ್ದಾರೆ. ಜೆಎನ್‌ಯು ಮತ್ತು ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳು ರಾಜಕೀಯ ಅಥವಾ ರಾಜ್ಯವನ್ನು ನೋಡದೆ ಮೊದಲು ಹೋರಾಟವನ್ನು ಕೈಗೊಂಡಿದ್ದಾರೆ. ಈ ಎಲ್ಲಾ ಹೋರಾಟಗಳು ಭಾರತದ ಸಂವಿಧಾನ ನಾಶಗೊಳ್ಳುವ ವಿರುದ್ಧವಾಗಿವೆ. ಕಾನೂನು ಕುರಿತು ನಿರ್ಧರಿಸುವವರೆಗೆ ಮುಷ್ಕರ ಮುಂದುವರಿಯಲಿದೆ. ಎಲ್ಲರೂ ಒಗ್ಗಟ್ಟಾಗಿರುವ ಮುಷ್ಕರ ಅಗತ್ಯ ಎಂದು ಕಾಂತಪುರಂ ಹೇಳಿದರು.

ಭಿನ್ನಿಸಿ ನಿಂತ ಹೋರಾಟ ಪರಿಣಾಮಕಾರಿಯಲ್ಲ.ಒಟ್ಟಾಗಿ ಹಿಂಸೆ ಅಥವಾ ಆಕ್ರೋಶ ರಹಿತ ಮುಷ್ಕರಗಳು ನಡೆಯಬೇಕು. ಎಲ್‌ಡಿಎಫ್ ಮತ್ತು ಯುಡಿಎಫ್ ಒಗ್ಗಟ್ಟಾಗಿ ಮುಷ್ಕರ ನಡೆಸಬೇಕೆ ಎಂಬ ಪ್ರಶ್ನೆಗೆ ಅದು ಅವರವರ ಪಕ್ಷದ ತೀರ್ಮಾನಕ್ಕೆ ಬಿಟ್ಟದ್ದು, ಆ ವಿಷಯದಲ್ಲಿ ಹಸ್ತಕ್ಷೇಪ ಇಚ್ಛಿಸುವುದಿಲ್ಲ, ಈ ಹಿಂದೆ ನಡೆಸಿದಂತೆ ಏಕೀಕೃತ ಹೋರಾಟ ಉತ್ತಮ ಎಂದರು.

error: Content is protected !! Not allowed copy content from janadhvani.com