janadhvani

Kannada Online News Paper

ಮಂಗಳೂರು ಗೋಲಿಬಾರ್: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಖಾಝಿ ಬೇಕಲ್ ಉಸ್ತಾದ್ ಆಗ್ರಹ

ಮಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆಗಳು ಸಹಜವಾಗಿದೆ. ಅದರಂತೆ ದೇಶಾದ್ಯಂತ NRC ಮತ್ತು CAA ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಆದರೆ ದ.ಕ.ಜಿಲ್ಲೆಯಲ್ಲಿ ಮಾತ್ರ ಪ್ರತಿಭಟನಾ ಸಮಾವೇಶಕ್ಕೆ ಹಲವು ಬಾರಿ ಅನುಮತಿ ನಿರಾಕರಿಸುವ ಮೂಲಕ ಪೋಲಿಸ್ ಅಧಿಕಾರಿಗಳು ಪ್ರತಿಭಟನೆಯ ಧ್ವನಿಯನ್ನೇ ಹತ್ತಿಕ್ಕುವ ಪ್ರಯತ್ನ ಮಾಡಿರುವುದು ಖಂಡನೀಯ.

ಡಿ.19 ರಂದು ದ.ಕ.ಜಿಲ್ಲೆಯಲ್ಲಿ 144 ಸೆಕ್ಷನ್ ನಿಷೇಧಾಜ್ಞೆಯನ್ನು ಅನಗತ್ಯವಾಗಿ ಜಾರಿಗೊಳಿಸಿ ನಾಗರಿಕರ ಸಂವಿಧಾನ ಬದ್ಧ ಹಕ್ಕನ್ನು ಜಿಲ್ಲೆಯ ಪೋಲಿಸ್ ಅಧಿಕಾರಿಗಳು ಕಸಿದಿರುವುದರಿಂದಲೇ ಜಿಲ್ಲೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಲು ಕಾರಣವಾಯ್ತು.

ಜಿಲ್ಲಾಧಿಕಾರಿಗಳ ಕಚೇರಿ, ಸರ್ವೀಸ್ ಬಸ್ ನಿಲ್ದಾಣ, ಹಲವು ವಾಣಿಜ್ಯ ಸಂಕೀರ್ಣಗಳು , ಹಾಗೂ ಮೀನು ಮಾರುಕಟ್ಟೆಗಳೆಲ್ಲ ಅಕ್ಕಪಕ್ಕ ಇರುವ, ಸದಾ ಜನನಿಬಿಡವಾಗಿರುವ ಸ್ಟೇಟ್ ಬ್ಯಾಂಕ್ ವೃತ್ತದಂತಹ ಸ್ಥಳದಲ್ಲಿ 144 ಸೆಕ್ಷನ್ ನೆಪದಲ್ಲಿ ಏಕಾಏಕಿ ಲಾಠಿಪ್ರಹಾರ ಮಾಡುವುದರಿಂದ ಜನರಲ್ಲಿ ಅನಗತ್ಯ ಭಯ ಹುಟ್ಟುತ್ತದೆ ಎಂಬ ಸಾಮಾನ್ಯ ಪರಿಜ್ಞಾನವಾದರೂ ಪೋಲಿಸರಿಗಿರಬೇಕಿತ್ತು. ಹೀಗೆ ಲಾಠಿ ಬೀಸಿದ್ದರಿಂದಲೇ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿರುವುದಾಗಿ ವೀಡಿಯೋಗಳ ಮೂಲಕ ಸಾಬೀತಾಗುತ್ತದೆ.

ಪೋಲಿಸರು ವಿನಾಕಾರಣ ವಿಧ್ಯಾರ್ಥಿಗಳು, ವ್ಯಾಪಾರಿಗಳು, ಯುವಕರ ಮೇಲೆ ಲಾಠಿ ಪ್ರಯೋಗಿಸಿ, ತೀವ್ರವಾಗಿ ಹಿಂಸಿಸಿ ಗಲಭೆಗೆ ಪ್ರಚೋದನೆ ನೀಡಿದ್ದಾರೆ.
ಈ ಹಿಂಸೆಯ ವೇಳೆ ಒಂದು ಸಮುದಾಯವನ್ನು ಗುರಿಯಾಗಿಸಿ ಜಾತಿ ನಿಂದನೆಯನ್ನೂ ಮಾಡಿದ ಬಗ್ಗೆ ವಿಡಿಯೋ ತುಣುಕುಗಳು ದೃಢ ಪಡಿಸಿವೆ. ಜನರನ್ನು ಕೊಲ್ಲುವ ಉದ್ದೇಶ ದಿಂದಲೇ ಬಂದೂಕು ಹಿಡಿದಿರುವುದು ಕೂಡಾ ಪೋಲಿಸರ ಸಂಭಾಷಣೆಯ ವೀಡಿಯೋಗಳಿಂದ ಗೊತ್ತಾಗುತ್ತದೆ.

ಜನರನ್ನು ಹಿಂಸಿಸಿ, ಜನರು ತಿರುಗಿಬಿದ್ದಾಗ ಅವರನ್ನು ನಿಯಂತ್ರಿಸಲು ಹಲವು ಮಾರ್ಗಗಳು ಇದ್ದಾಗಲೂ ಅದ್ಯಾವುದನ್ನೂ ಮಾಡದೆ ನೇರವಾಗಿ ಅಮಾಯಕರ ಸೊಂಟದ ಮೇಲಕ್ಕೆ ಗುಂಡು ಹಾರಿಸಿ‌ ಪೋಲಿಸ್ ನಿಯಮಾವಳಿಗಳನ್ನೇ ಉಲ್ಲಂಘಿಸಿ ಅಮಾನವೀಯವಾಗಿ ವರ್ತಿಸಿದ್ದಾರೆ.

ಬಂದೂಕಿಲ್ಲದೇ, ಫೈರಿಂಗ್ ಮಾಡದೇ ಗುಂಪನ್ನು ನಿಯಂತ್ರಿಸುವ ಸಾಮಾರ್ಥ್ಯ ನಮ್ಮ ಜಿಲ್ಲೆಯ ಪೋಲಿಸರಿಗೆ ಇಲ್ಲವೇ?
ರಾಜ್ಯದ ಇತರ ಜಿಲ್ಲೆಗಳಲ್ಲಿ ಪ್ರತಿಭಟನೆಗೆ ಲಕ್ಷಾಂತರ ಜನರು ಸೇರಿಯೂ ಲಾಠಿ-ಬಂದೂಕು ಯಾವುದನ್ನೂ ಬಳಸದೇ ಅಲ್ಲಿನ ಪೋಲಿಸರು ಕಾನೂನು ಸುವ್ಯವಸ್ಥೆ ಕಾಪಾಡುವ ಮೂಲಕ ಜನಮೆಚ್ಚುಗೆ ಗಳಿಸಿರುವಾಗ; ದ.ಕ.ಜಿಲ್ಲೆಯ ಪೋಲಿಸರಿಗೇಕೆ ಅದು ಸಾಧ್ಯವಾಗಿಲ್ಲ?
ದ‌.ಕ.ದಲ್ಲಿ ಪೋಲಿಸರ ದರ್ಪದ
ಗುಂಡಿನ ದಾಳಿಗೆ ಇಬ್ಬರು ಹತರಾಗಿರುವುದಲ್ಲದೇ ಮೂವರು ಇನ್ನೂ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಇದೆಲ್ಲವನ್ನೂ ಪೋಲೀಸರು ಒಂದೇ ಕೋಮಿನವರನ್ನು ಲಕ್ಷ್ಯ ವಾಗಿಟ್ಟು ನಡೆಸಿರುವುದು ಗಮನಾರ್ಹ.

ಗಲಭೆಗೆ ಸಂಬಂಧಿಸಿ ಪೋಲಿಸರು ವೀಡಿಯೋ/ಫೋಟೋ ತುಣುಕುಗಳನ್ನು ಸಂಗ್ರಹಿಸಿ ಸಾರ್ವಜನಿಕರಿಗೆ/ಮಾಧ್ಯಮಗಳಿಗೆ ಬಿಡುಗಡೆ ಮಾಡುವ ಅಗತ್ಯ ಏನಿತ್ತು? ಇದು ಸಮಾಜದಲ್ಲಿ ನಿಗದಿತ ಒಂದು ಕೋಮಿನ ವಿರುದ್ಧ ಇತರರನ್ನು ಎತ್ತಿಕಟ್ಟುವ ಪ್ರಯತ್ನ. ಪ್ರಚೋದನಕಾರಿ ವಿಡಿಯೋ/ಸಂದೇಶಗಳನ್ನು ಸಾಮಾಜಿಕ ಜಾಲತಾಣ ಮೂಲಕ ಹರಡುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿಕೆ ನೀಡುವ ಪೋಲಿಸ್ ಅಧಿಕಾರಿಗಳೇ ಏಕಪಕ್ಷೀಯ ವೀಡಿಯೋಗಳನ್ನು ವೈರಲ್ ಮಾಡುತ್ತಿರುವುದು ದುರಂತ.

ಇಂತಹ ಪ್ರಚೋದನಕಾರಿ ಕೃತ್ಯವನ್ನು ಪೋಲಿಸರೇ ಮಾಡುತ್ತಾರೆಂದರೆ ಕಾನೂನು ಪಾಲನೆಗಾಗಿ ಜನರು ಯಾರನ್ನು ಆಶ್ರಯಿಸಬೇಕು?
ಗಲಭೆ‌ ನಡೆದು ದಿನಗಳು ಕಳೆದ ಬಳಿಕವೂ ಸಮಾಜದಲ್ಲಿ ಶಾಂತಿ ಮರುಸ್ಥಾಪಿಸುವ ಉದ್ದೇಶ ಪೋಲಿಸರಿಗೆ ಇದ್ದಂತಿಲ್ಲ.
ಅನಗತ್ಯ ಗೋಲಿಬಾರ್ ನಿಂದ ರೊಚ್ಚಿಗೆದ್ದ ಆಕ್ರೋಶಿತ ಸಾರ್ವಜನಿಕರ ವೀಡಿಯೋ ತುಣುಕುಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಗೊಳಿಸಿ ಮುಸ್ಲಿಂ ಯುವಕರನ್ನು ಗಲಭೆಕೋರರು, ಗಲಭೆಗೆ ಷಡ್ಯಂತ್ರ ರೂಪಿಸಿದವರು ಎಂಬ ಹಣೆಪಟ್ಟಿಯನ್ನು ನೀಡುವ ಹತಾಶ ಪ್ರಯತ್ನವನ್ನು ಮಂಗಳೂರು ಪೋಲೀಸರು ಮಾಡುತ್ತಿದ್ದಾರೆ.

ಮಾಧ್ಯಮವನ್ನು, ಸರ್ಕಾರ ವನ್ನು ದಾರಿ ತಪ್ಪಿಸಿ ಘಟನೆಯನ್ನು ತಿರುಚುವ ಪ್ರಯತ್ನವನ್ನು ಕೂಡ ಪೋಲೀಸ್ ಇಲಾಖೆ ಮಾಡುತ್ತಿದೆ. ಇದು ಖಂಡನೀಯ.
ಅತ್ಯಂತ ಖೇದಕರ ಸಂಗತಿಯೆಂದರೆ, ಶಾಂತಿಪ್ರಿಯ ಮಂಗಳೂರಿನ ಜನತೆಯ ಮುಂದೆ ಮುಸ್ಲಿಂ ಯುವಕರನ್ನು ಗಲಭೆ ಕೋರರು, ಮಂಗಳೂರನ್ನು ಕಾಶ್ಮೀರವಾಗಿ ಸೃಷ್ಟಿಸುವ ಹುನ್ನಾರ ನಡೆಸುವವರು ಎನ್ನುವಂತೆ ಬಿಂಬಿಸುವ ಮೂಲಕ ಸಾಮರಸ್ಯವನ್ನು ಕದಡುವ ಪ್ರಯತ್ನವನ್ನು ಪೋಲಿಸರೇ ಮಾಡುತ್ತಿರುವುದು.

ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥ ಪೋಲೀಸ್ ಅಧಿಕಾರಿಗಳನ್ನು ವಜಾ ಗೊಳಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಈ ಮೂಲಕ ವಿನಂತಿಸುತ್ತಿದ್ದೇವೆ.
ಮೃತರ ಬಗ್ಗೆ ಅವಮಾನ ಕಾರಿಯಾಗಿ ಹೇಳಿಕೆ ನೀಡಿ ನೊಂದ ಕುಟುಂಬಗಳಿಗೆ ಇನ್ನಷ್ಟು ನೋವು ಕೊಡುವ ರಾಕ್ಷಸೀಯ ಮನೋವೃತ್ತಿಯನ್ನು ತೀವ್ರ ವಾಗಿ ನಾವು ಖಂಡಿಸುತ್ತೇವೆ. ಘಟನೆಯನ್ನು ರಾಜಕೀಯ ಗೊಳಿಸುವ ಎಲ್ಲಾ ಹುನ್ನಾರ ವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ.

ಯಾವುದೇ ವಿಧ ಅನ್ಯಾಯದ ವಿರುದ್ಧ ನಡೆಯುವ ಸಾಂವಿಧಾನಿಕ ಹೋರಾಟದೊಂದಿಗೆ ಎಲ್ಲರೂ ಕೈ ಜೋಡಿಸಬೇಕೆಂದು ಈ ಮೂಲಕ ಸಾರ್ವಜನಿಕರಿಗೆ ಕರೆ ಕೊಡುತ್ತಿದ್ದೇವೆ.

ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ದ ಪ್ರಮುಖರು:

ಖಾಝಿ ತಾಜುಲ್ ಫುಕಹಾಅ್ ಪಿ ಎಂ ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಉಡುಪಿ, ಚಿಕ್ಕಮಗಳೂರು, ಹಾಸನ ದ ಕ ಸಂಯುಕ್ತ ಖಾಝಿ ಗಳು,ಎಚ್ ಐ ಅಬೂಸುಫ್ಯಾನ್ ಮದನಿ
ಉಪಾಧ್ಯಕ್ಷರು ಕರ್ನಾಟಕ ಮುಸ್ಲಿಂ ಜಮಾಅತ್, ಹಾಜಿ ಎಸ್ ಎಮ್ ರಷೀದ್ ಕಾರ್ಯಾಧ್ಯಕ್ಷ ರು ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಜಿಲ್ಲೆ, ಎಸ್ ಪಿ ಹಂಝ ಸಖಾಫಿ ಅಧ್ಯಕ್ಷ ರು ಸುನ್ನಿ ಕೋ ಆರ್ಡಿನೇಷನ್ ಕರ್ನಾಟಕ,
ಬಿ ಎಂ ಮಮ್ತಾಜ್ ಅಲಿ ಪ್ರಧಾನ ಕಾರ್ಯದರ್ಶಿ ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಜಿಲ್ಲೆ, ಪಿ ಪಿ ಅಹ್ಮದ್ ಸಖಾಫಿ ಕಾಶಿಪಟ್ನ ಪ್ರಧಾನ ಕಾರ್ಯದರ್ಶಿ ಸುನ್ನಿ ಕೋ ಆರ್ಡಿನೇಷನ್ ಕರ್ನಾಟಕ, ಡಾ ಎಮ್ಮೆಸ್ಸೆಂ ಝೈನೀ ಕಾಮಿಲ್ ಪ್ರಧಾನ ಕಾರ್ಯದರ್ಶಿ SჄS ಕರ್ನಾಟಕ, ತೋಕೆ ಮುಹ್ ಯ್ಯುದ್ದೀನ್ ಕಾಮಿಲ್ ಸಖಾಫಿ ಪ್ರಧಾನ ಕಾರ್ಯದರ್ಶಿ SJU ದಕ್ಷಿಣ ಕನ್ನಡ, ಎನ್ ಎಮ್ ಅಬ್ದುರಹ್ಮಾನ್ ಮದನಿ ಜೆಪ್ಪು ಪ್ರಧಾನ ಕಾರ್ಯದರ್ಶಿ SMA ಕರ್ನಾಟಕ, ಕೆ ಕೆ ಎಂ ಕಾಮಿಲ್ ಸಖಾಫಿ ಅಧ್ಯಕ್ಷ ರು SEDC ಕರ್ನಾಟಕ,
ಹಾಫಿಳ್ ಯಾಕೂಬ್ ಸಅದಿ ನಾವೂರು ಕಾರ್ಯದರ್ಶಿ SSF ಕರ್ನಾಟಕ, ಅಬ್ದುಲ್ ಹಮೀದ್ ಬಜ್ಪೆ, ಅಬ್ದುರಹ್ಮಾನ್ ರಝ್ವಿ ಕಲ್ಕಟ್ಟ,
ಅಶ್ರಫ್ ಕಿನಾರ ಮಂಗಳೂರು.

error: Content is protected !! Not allowed copy content from janadhvani.com