ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟಿಸುತ್ತಿದ್ದವರನ್ನು ಚದುರಿಸಲು ಪೋಲೀಸರು ಗೋಲಿಬಾರ್ ನಡೆಸಿದ್ದು, ನಗರದಲ್ಲಿ ಕೆಲಸ ನಿರ್ವಹಿಸಿ ಮನೆಗೆ ಮರಳುತ್ತಿದ್ದ ಇಬ್ಬರು ಅಮಾಯಕರನ್ನು ಗುಂಡು ಹಾರಿಸಿ ಕಗ್ಗೊಲೆಗೈದ ಮಂಗಳೂರು ಪೊಲೀಸರ ಕ್ರಮವನ್ನು ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ (ಎಸ್.ವೈ.ಎಸ್) ತೀವ್ರವಾಗಿ ಖಂಡಿಸಿದೆ.
ಉದ್ದೇಶಪೂರ್ವಕ ಕೊಲೆಯ ಸಂಚನ್ನು ಅನುಷ್ಠಾನಗೊಳಿಸುವ ಮಾತುಗಳು ಮತ್ತು ವಿಡಿಯೋಗಳು ಹೊರಬಂದಿದ್ದು ಇದು ಅಲ್ಪಸಂಖ್ಯಾತರಲ್ಲಿ ಆತಂಕವನ್ನು ಹೆಚ್ಚಿಸಿದೆ. ಜನರಿಗೆ ಸಂರಕ್ಷಣೆ ಕೊಡಬೇಕಾದ ಪೊಲೀಸರಿಂದಲೇ ಇಂತಹ ಕೃತ್ಯಗಳು ಉಂಟಾಗಿರುವುದು ಈ ನಾಡಿನ ಪ್ರತಿಯೊಬ್ಬರೂ ಗಂಭೀರವಾಗಿ ಯೋಚನೆ ಮಾಡಬೇಕಾದ ಸಂಗತಿಗಳಾಗಿದ್ದು ತಪ್ಪಿತಸ್ಥರನ್ನು ತಕ್ಷಣ ಅವರ ಸ್ಥಾನಗಳಿಂದ ವಜಾಗೊಳಿಸಿ ಸರಕಾರ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಬೇಕೆಂದು ಸಂಘಟನೆ ವಿನಂತಿಸಿಕೊಂಡಿದೆ.
ಮೃತ ಅಬ್ದುಲ್ ಜಲೀಲ್ ಅವರ ಎರಡು ಮಕ್ಕಳನ್ನು ಕಾಸರಗೋಡು ಸ’ಅದಿಯ್ಯ ವಿದ್ಯಾಸಂಸ್ಥೆ ದತ್ತು ತೆಗೆದುಕೊಂಡಿರುವ ಕ್ರಮವನ್ನು ಸಂಘಟನೆ ಶ್ಲಾಘಿಸಿದೆ. ಉಲಮಾಗಳ ನೇತೃತ್ವದಲ್ಲಿ ನಡೆಯುವ ಇಂಥ ಸತ್ಕಾರ್ಯಗಳು ಸಮುದಾಯದ ಘನತೆ ಹೆಚ್ಚಿಸಿದೆ ಎಂದು ಎಸ್.ವೈ.ಎಸ್. ಅಭಿಪ್ರಾಯ ಪಟ್ಟಿದೆ.
ಸಿ.ಎ.ಎ ಯಂತಹ ಸಂವಿಧಾನ ವಿರೋಧಿ ಕಾಯ್ದೆಗಳ ವಿರುದ್ಧ ಶಾಂತವಾದ ರೀತಿಯಲ್ಲಿ ಪ್ರತಿಭಟಿಸಿ ಸರಕಾರದ ಗಮನವನ್ನು ಸೆಳೆಯುವ ಕೆಲಸಗಳು ಮುಂದೆಯೂ ನಡೆಯಬೇಕು. ಆದರೆ ಹಿಂಸೆಯ ಮಾರ್ಗಗಳನ್ನು ಯಾರೂ ಅನುಸರಿಸಬಾರದು ಎಂದು ಎಸ್. ವೈ.ಎಸ್ ರಾಜ್ಯಾಧಕ್ಷ ಜಿಎಂ ಮುಹಮ್ಮದ್ ಕಾಮಿಲ್ ಸಖಾಫಿ ಹಾಗೂ ಪ್ರಧಾನ ಕಾರ್ಯದರ್ಶಿ ಡಾ. ಎಂ ಎಸ್ ಎಮ್ ಝೈನೀ ಕಾಮಿಲ್ ಪತ್ರಿಕಾ ಹೇಳಿಕೆಯಲ್ಲಿ ವಿನಂತಿಸಿಕೊಂಡಿದ್ದಾರೆ.






