ಶಾರ್ಜಾ: ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧ ಮಂಗಳೂರಿನಲ್ಲಿ ಡಿಸೆಂಬರ್ 19 ರಂದು ಶಾಂತಿಯುತ ಪ್ರತಿಭಟನೆಗೆ ಅವಕಾಶ ನೀಡದೇ ಏಕಾಏಕಿ ಸೆಕ್ಷನ್ 144 ಹಾಕಿ ಮುಖ್ಯ ಮಂತ್ರಿ ಆದೇಶವನ್ನು ಮೀರಿ ಅಮಾಯಕ ಎರಡು ಜೀವಗಳು ಬಲಿಯಾಗಲು ನೇರ ಕಾರಣರಾದ ಮಂಗಳೂರು ಪೊಲೀಸ್ ಅಧಿಕಾರಿಗಳನ್ನು ತಕ್ಷಣವೇ ವಜಾ ಗೊಳಿಸಲು ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ವತಿಯಿಂದ ನಡೆದ ಪೌರ ಸಮ್ಮಿಲನ ಒಕ್ಕೊರಲಿನಿಂದ ಒತ್ತಾಯಿಸಿದೆ.ಪ್ರತಿಭಟನೆ ವೇಳೆ ಸೇರಿದ್ದ ಕೆಲವೇ ಕೆಲವು ಯುವಕರ ಮನಸೆಳೆಯುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದ್ದು, ಮನಬಂದಂತೆ ಲಾಠಿ ಚಾರ್ಜ್ ಮಾಡಿ ಯುವಕರ ಗುಂಪು ಆಕ್ರೋಶಗೊಳ್ಳುವಂತೆ ಮಾಡಿದರು. ಕಾನೂನಿನ ಯಾವುದೇ ಪರಿಧಿಯನ್ನು ಪಾಲಿಸದೆ ನೇರವಾಗಿ ಗುಂಡನ್ನು ಹಾರಿಸಿ ಇಬ್ಬರು ಅಮಾಯಕರ ಜೀವಹಾನಿಗೆ ಕಾರಣವಾದರು.ಈ ಎಲ್ಲಾ ಗಲಭೆಗೆ ಪೊಲೀಸ್ ಅಧಿಕಾರಿಗಳು ನೇರ ಕುಮ್ಮಕ್ಕು ನೀಡಿದ್ದಲ್ಲದೆ, ಸೆಕ್ಷನ್ ಹಾಕುವ ಮುಂಚಿನಿಂದ ಅವರು ಹೇಳಿದ ಕಟ್ಟುಕಥೆಗಳೆ ಎಲ್ಲಾ ಗಲಭೆಗೆ ಕಾರಣವಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡ ಬೇಕಿದ್ದ ಪೊಲೀಸ್ ಇಲಾಖೆ ನೇರವಾಗಿ ಗಲಭೆಗೆ ನೇತೃತ್ವ ಕೊಟ್ಟು ಕರ್ತವ್ಯ ಲೋಪ ಎಸಗಿದ ಪರಿಣಾಮವಾಗಿದೆ ಅಂತ ಪೌರ ಸಮ್ಮಿಲನವು ಆತಂಕ ವ್ಯಕ್ತಪಡಿಸಿತು.ಅಲ್ಲದೆ ನೈಜ ವರದಿ ಮಾಡುತ್ತಿದ್ದ ಕೇರಳ ಮೂಲದ ಪತ್ರಕರ್ತರ ಜೊತೆ ಗೂಂಡಾ ವರ್ತನೆ ತೋರಿಸಿ ಅವರನ್ನು ಬಂಧಿಸಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಂದ ಕರ್ನಾಟಕ ಸರಕಾರಕ್ಕೆ ಚೀಮಾರಿ ಹಾಕಿಸಿದ್ದು ಎಲ್ಲಾ ಘಟನೆಗಳಿಗೆ ಪೊಲೀಸ್ ನೇರ ಹೊಣೆಯಾಗಿದ್ದು ಅವರನ್ನು ತಕ್ಷಣ ಕೆಲಸದಿಂದ ವಜಾಗೊಳಿಸಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಕೆಸಿಎಫ್ ಯುಎಇ ಒತ್ತಾಯ ಮಾಡುತ್ತಿದೆ.
ಕೆಸಿಎಫ್ ಯುಎಇ ಸಮಿತಿ ಅಧ್ಯಕ್ಷರಾದ ಅಬ್ದುಲ್ ಜಲೀಲ್ ನಿಝಾಮಿ ಎಮ್ಮೆಮಾಡು ರವರ ಅಧ್ಯಕ್ಷತೆಯಲ್ಲಿ ನಡೆದ “ಜಾತ್ಯತೀತ ರಾಷ್ಟ್ರ ಧಾರ್ಮಿಕ ಪೌರತ್ವ” ಎಂಬ ಶೀರ್ಷಿಕೆಯಲ್ಲಿ ಶಾರ್ಜಾ ದಲ್ಲಿ ನಡೆದ ಪೌರ ಸಮ್ಮಿಲನವನ್ನು ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ತಾಲೂಕು ಉಪಾಧ್ಯಕ್ಷ ಮುಹಮ್ಮದ್ ಕುಕ್ಕುವಳ್ಳಿ ಉದ್ಘಾಟಿಸಿಸಿದರು. ಕೆಸಿಎಫ್ ಯುಎಇ ಸಂಘಟನಾ ಅಧ್ಯಕ್ಷರಾದ ಇಕ್ಬಾಲ್ ಕಾಜೂರು ದಿಕ್ಸೂಚಿ ಭಾಷಣ ಮಾಡಿದರು. ಮುಸ್ತಫಾ ಮಾಸ್ಟರ್ ಉಳ್ಳಾಲ, ನಿಝಾಮ್ ಮದನಿ ಉರುವಾಲಪದವು, ಅಝ್ಮಾನ್ ಚಾರ್ಮಾಡಿ, ಇಬ್ರಾಹಿಂ ಪೈಝಿ ಕುಪ್ಪೆಟ್ಟಿ , ಕಬೀರ್ ಬಾಯಂಬಾಡಿ ಅಬುಧಾಬಿ ವಿಚಾರ ಮಂಡಿಸಿದರು. ಖ್ಯಾತ ಚಿಂತಕರಾದ ಸಯ್ಯದ್ ಹುಸೈನ್ ತಂಙ್ಙಳ್ ವಾಡಾನಪಳ್ಲಿ ರವರು NRC ಮತ್ತು CAA ಕುರಿತು ಕೂಲಂಕುಶವಾಗಿ ವಿವರಿಸಿ ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿದರು.
ಕಲಂದರ್ ಕಬಕ ಸ್ವಾಗತ ನಿರ್ವಹಿಸಿ, ರಫೀಕ್ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು. ಮಂಗಳೂರು ಘಟನೆಯಲ್ಲಿ ಮೃತಪಟ್ಟವರ ಹೆಸರಿನಲ್ಲಿ ಪ್ರಾರ್ಥನೆ ಮತ್ತು ತಹ್ಲೀಲ್ ಸಮರ್ಪಣೆ ನಡೆಯಿತು.