janadhvani

Kannada Online News Paper

ಪೌರತ್ವ ತಿದ್ದುಪಡಿ ಕಾಯ್ದೆ: ಈಶಾನ್ಯ ರಾಜ್ಯಗಳಲ್ಲಿ ಮುಂದುವರಿದ ಆಕ್ರೋಶ

ನವದೆಹಲಿ (ಡಿ.15): ಪೌರತ್ವ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತಪಡಿಸಿ ಅಸ್ಸಾಂನಲ್ಲಿ ನಡೆಯುತ್ತಿರುವ ಪ್ರತಿಭಟನೆ ಕಾವು ದಿನೇ ದಿನೇ ಹೆಚ್ಚುತ್ತಲೇ ಇದೆ. ಈ ಮಧ್ಯೆ ಪ್ರತಿಭಟನೆಯಲ್ಲಿ ಮೃತಪಟ್ಟವರ ಸಂಖ್ಯೆ 5ಕ್ಕೆ ಏರಿಕೆ ಆಗಿದೆ.

ಪೌರತ್ವ ತಿದ್ದುಪಡಿ ಮಸೂದೆಗೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅನುಮೋದನೆ ದೊರೆತಿತ್ತು. ಇದನ್ನು ಖಂಡಿಸಿ ಅಸ್ಸಾಂನಲ್ಲಿ ಬೃಹತ್​ ಪ್ರತಿಭಟನೆ ಆರಂಭವಾಗಿದೆ. ಗುರುವಾರ ಪ್ರತಿಭಟನಾನಿರತರ ಮೇಲೆ ಪೊಲೀಸರು ಗುಂಡು ಹಾರಿಸಿದ್ದರು. ಈ ವೇಳೆ ಇಬ್ಬರು ಬಲಿಯಾಗಿದ್ದರು. ಹಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಈ ಪೈಕಿ ಈಗ ಮೂವರು ಮೃತಪಟ್ಟಿದ್ದಾರೆ.

ಪೊಲೀಸರ ಗುಂಡಿನ ದಾಳಿಗೆ ಸ್ಥಳದಲ್ಲೇ ಓರ್ವ ಪ್ರತಿಭಟನಕಾರ ಮೃತಪಟ್ಟಿದ್ದರೆ, ಆಸ್ಪತ್ರೆಯಲ್ಲಿ ಮೂವರು ಮೃತಪಟ್ಟಿದ್ದರು. ಇಂದು ಮತ್ತೋರ್ವ ಪ್ರತಿಭಟನಾಕಾರ ಮೃತಪಟ್ಟಿದ್ದಾನೆ. ಈ ಮೂಲಕ ಸಾವಿನ ಸಂಖ್ಯೆ 5ಕ್ಕೆ ಏರಿಕೆ ಆಗಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಅಸ್ಸಾಂ ಹಾಗೂ ತ್ರಿಪುರಾದಲ್ಲಿ ಪ್ರತಿಭಟನೆ ನಡೆದಿತ್ತು. ಈ ಪ್ರತಿಭಟನೆ ಈಗ ಪಶ್ಚಿಮಬಂಗಾಳಕ್ಕೂ ವ್ಯಾಪಿಸಿದೆ. ಅಲ್ಲದೆ, ಮೇಘಾಲಯ, ದೆಹಲಿ, ಅರುಣಾಚಲ ಪ್ರದೇಶದಲ್ಲೂ ಪ್ರತಿಭಟನೆ ನಡೆಯುತ್ತಿದೆ.ಶನಿವಾರ ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಕನಿಷ್ಠ ಎರಡು ರೈಲು ಹಾಗೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ಬಸ್ ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಮುರ್ಷಿದಾಬಾದ್ ಜಿಲ್ಲೆಯ ಕೃಷ್ಣಪುರ ರೈಲ್ವೆ ನಿಲ್ದಾಣದಲ್ಲಿ ಒಂದು ರೈಲಿಗೆ ಹಾಗೂ ಲಾಲ್ ಗೋಲ ರೈಲ್ವೆ ನಿಲ್ದಾಣದಲ್ಲಿ ಮತ್ತೊಂದು ರೈಲಿಗೆ ಬೆಂಕಿ ಹಚ್ಚಲಾಗಿದ್ದು, ಎರಡೂ ರೈಲುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.

ಬೆಳಗ್ಗೆ ಹೌರಾ ಜಿಲ್ಲೆಯ ಸಂಕ್ರೇಲ್‌ ರೈಲು ನಿಲ್ದಾಣಕ್ಕೆ ಬೆಂಕಿ ಹಚ್ಚಿದ್ದಾರೆ. ರೈಲು ನಿಲ್ದಾಣ ಭಾಗಶಃ ಸುಟ್ಟುಹೋಗಿದೆ. ಅಲ್ಲದೆ ಪ್ರತಿಭಟನಕಾರರು ರೈಲು ನಿಲ್ದಾಣದಲ್ಲಿದ್ದ ಫಲಕಗಳು, ಕಾಂಕ್ರೀಟ್ ಬೆಂಚುಗಳನ್ನು ಧ್ವಂಸ ಮಾಡಿದ್ದಾರೆ. ಇದನ್ನು ತಡೆಯಲು ಬಂದ ರೈಲ್ವೆ ಪೊಲೀಸರ ಮೇಲೆ ಹಲ್ಲೆ ನಡೆಸಲಾಗಿದೆ. ಇದರ ಬೆನ್ನಲ್ಲೇ ಜಿಲ್ಲೆಯ ಹಲವೆಡೆ ರೈಲು ತಡೆ ನಡೆಸಲಾಗಿದೆ. ಹೀಗಾಗಿ ಬೆಳಿಗ್ಗೆ 11ರಿಂದ ಮಧ್ಯಾಹ್ನ ನಾಲ್ಕರವರೆಗೆ ರೈಲು ಸಂಚಾರ ಸ್ಥಗಿತವಾಗಿತ್ತು.

ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆಯೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಜನರು ಶಾಂತಿಯುತ ಪ್ರತಿಭಟನೆ ನಡೆಸಬೇಕು’ ಎಂದು ಕರೆಕೊಟ್ಟರು. ಆದರೆ, ಮಧ್ಯಾಹ್ನದ ನಂತರ ಪ್ರತಿಭಟನೆ ಮತ್ತಷ್ಟು ತೀವ್ರವಾಯಿತು. ಮುಂಬೈ–ಕೋಲ್ಕತ್ತ ಹೆದ್ದಾರಿ ಮತ್ತು ಮುಂಬೈ–ದೆಹಲಿ ಹೆದ್ದಾರಿ ಮಧ್ಯೆ ಸಂಪರ್ಕ ಕಲ್ಪಿಸುವ ಕೋನಾ ಎಕ್ಸ್‌ಪ್ರೆಸ್‌ ಹೆದ್ದಾರಿಗೆ ಇಳಿದ ಪ್ರತಿಭಟನಕಾರರು, ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ನಾಲ್ಕು ಸಾರಿಗೆ ಸಂಸ್ಥೆ ಬಸ್ ಗಳು ಸೇರಿದಂತೆ ಹಲವು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.

ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಮುಂದಾದರು. ಆಗ ಕಲ್ಲು ತೂರಾಟ ನಡೆಯಿತು. ಪೊಲೀಸರು ಅಶ್ರುವಾಯು ಷೆಲ್‌ ಸಿಡಿಸಿದರು. ಇದರಿಂದ ರೊಚ್ಚಿಗೆದ್ದ ಪ್ರತಿಭಟನಕಾರರು ಹೆದ್ದಾರಿಯಲ್ಲಿ ನಿಂತಿದ್ದ ಬಸ್‌ಗಳಿಗೆ ಬೆಂಕಿ ಹಚ್ಚಿದರು.

ನಂತರ ಜಿಲ್ಲಾ ಕೇಂದ್ರವನ್ನು ತಲುಪಿದ ಪ್ರತಿಭಟನಕಾರರು, ಹಲವು ಅಂಗಡಿಗಳಿಗೆ ಬೆಂಕಿ ಹಚ್ಚಿದರು. ಜಿಲ್ಲೆಯ ಬಹುತೇಕ ಎಲ್ಲಾ ಪ್ರಮುಖ ರಸ್ತೆಗಳಲ್ಲೂ ಟೈರ್‌ ಸುಟ್ಟು, ಸಂಚಾರಕ್ಕೆ ತಡೆ ಒಡ್ಡಲಾಗಿದೆ.

  • ಅಸ್ಸಾಂನಲ್ಲಿ ಇಂಧನ ಟ್ಯಾಂಕರ್‌ಗೆ ಬೆಂಕಿ ಹಚ್ಚಲಾಗಿದೆ, ಚಾಲಕ ಮೃತಪಟ್ಟಿದ್ದಾನೆ. ರಾಜ್ಯದಲ್ಲಿ ಇಂಟರ್ನೆಟ್‌ ಸ್ಥಗಿತವನ್ನು ಸೋಮವಾರದವರೆಗೆ ವಿಸ್ತರಿಸಲಾಗಿದೆ
  • ಮೇಘಾಲಯದಲ್ಲಿ ರಾಜಭವನಕ್ಕೆ ಮುತ್ತಿಗೆ ಹಾಕಲು ಪ್ರತಿಭಟನಕಾರರ ಯತ್ನ, ಪೊಲೀಸರೊಂದಿಗೆ ಘರ್ಷಣೆ, ಹಲವರಿಗೆ ಗಾಯ
  • ಪಶ್ಚಿಮ ಬಂಗಾಳ: ಐದು ರೈಲುಗಳು, 15 ಬಸ್‌ಗಳಿಗೆ ಬೆಂಕಿ. ರಾಜ್ಯದ ಹಲವೆಡೆ ಹೆದ್ದಾರಿ ತಡೆದು ಪ್ರತಿಭಟನೆ
  • ಡಿಸೆಂಬರ್ 19ರಂದು ದೇಶದಾದ್ಯಂತ ಪ್ರತಿಭಟನೆ ನಡೆಸಲು 60 ಸಂಘಟನೆಗಳಿಂದ ಕರೆ