janadhvani

Kannada Online News Paper

ದುಬೈ: ಸರಕಾರಿ ಸೇವೆಗಳನ್ನು ಸಂಪೂರ್ಣವಾಗಿ ಕಾಗದರಹಿತಗೊಳಿಸುವಂತೆ ಆದೇಶ

ದುಬೈ: ಸರಕಾರಿ ಸೇವೆಗಳನ್ನು ಸಂಪೂರ್ಣವಾಗಿ ಕಾಗದರಹಿತಗೊಳಿಸುವಂತೆ ಆದೇಶ ಹೊರಡಿಸಲಾಗಿದೆ. ಆ್ಯಪ್ ಮೂಲಕ ಎಲ್ಲಾ ಸರಕಾರಿ ಇಲಾಖೆಗಳ ಸೇವೆಯನ್ನು ನೀಡುವಂತೆ ದುಬೈ ಯುವರಾಜ ನಿರ್ದೇಶನ ನೀಡಿದ್ದಾರೆ.

2021 ರ ನಂತರ, ದುಬೈನ ಯಾವುದೇ ಸರಕಾರಿ ಸಂಸ್ಥೆ ಕೂಡ ಕಾಗದದಲ್ಲಿ ದಾಖಲೆಗಳನ್ನು ಸಲ್ಲಿಸಲು ಆದೇಶ ನೀಡುವುದಿಲ್ಲ. ಸರಕಾರಿ ನೌಕರರು ಕಚೇರಿಯಲ್ಲಿ ಆಂತರಿಕ ವ್ಯವಹಾರಗಳಿಗೆ ಕಾಗದ ಬಳಸುವುದನ್ನು ಸಹ ನಿಲ್ಲಿಸಲಾಗುತ್ತದೆ. ದುಬೈನ ಯುವರಾಜ ಮತ್ತು ದುಬೈನ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾದ ಶೈಖ್ ಹಮ್ದಾನ್ ಬಿನ್ ಮುಹಮ್ಮದ್ ಬಿನ್ ರಾಶಿದ್ ಅಲ್-ಮಕ್ತೂಮ್ ಕಳೆದ ವರ್ಷ ದುಬೈ ಪೇಪರ್‌ಲೆಸ್ ಸ್ಟ್ರಾಟಜಿ ಘೋಷಿಸಿದ್ದರು.

ಮೊದಲ ವರ್ಷದಲ್ಲಿಯೇ 15 ಸರಕಾರಿ ಇಲಾಖೆಗಳು ಕಾಗದರಹಿತ ನೀತಿಯನ್ನು ಜಾರಿಗೆ ತರಲು ಮುಂದಾದವು. ‘ದುಬೈ ನೌ’ ಆ್ಯಪ್ ಮೂಲಕ 88 ಸರಕಾರಿ ಸೇವೆಗಳನ್ನು ಲಭ್ಯಗೊಳಿಸಲಾಗಿದೆ. 2021ರ ಡಿಸೆಂಬರ್‌ 12 ರಂದು, ಎಲ್ಲಾ ಸರಕಾರಿ ಸೇವೆಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸುವಂತೆ ಪ್ರಸ್ತಾಪಿಸಲಾಗಿದೆ. ಡಿಜಿಟಲೀಕರಣದಿಂದ, ದುಬೈ ನಿವಾಸಿಗಳಿಗೆ ವರ್ಷಕ್ಕೆ 40 ಗಂಟೆಗಳ ಉಳಿತಾಯ ಮಾಡಬಹುದು. ಮಿಲಿಯನ್ ಗಟ್ಟಲೆ ಪೇಪರ್‌ಗಳನ್ನು ಉಳಿಸಿ 1,30,000 ಮರಗಳನ್ನು ಉಳಿಸಬಹುದು. ಈ ಮೂಲಕ 900 ಮಿಲಿಯನ್ ದಿರ್ಹಂ ಉಳಿಸಬಹುದು ಎಂದು ಅಂದಾಜಿಸಲಾಗಿದೆ.