janadhvani

Kannada Online News Paper

ಅನರ್ಹರಿಗೆ ಸದ್ಯಕ್ಕಿಲ್ಲ ರಿಲೀಫ್: ಅರ್ಜಿ ವಿಚಾರಣೆ ಬುಧವಾರಕ್ಕೆ ಮುಂದೂಡಿಕೆ

ನವದೆಹಲಿ,ಸೆಪ್ಟೆಂಬರ್​.23: ಕಾಂಗ್ರೆಸ್​ ಮತ್ತು ಜೆಡಿಎಸ್​ಗೆ ರಾಜೀನಾಮೆ ನೀಡಿ ಅನರ್ಹಗೊಂಡಿರುವ ಶಾಸಕರ ಕ್ಷೇತ್ರಗಳಿಗೆ ಮುಂದಿನ ತಿಂಗಳು ಉಪ ಚುನಾವಣೆ ನಡೆಯಲಿದೆ. ಇದರಿಂದ ಅನರ್ಹ ಶಾಸಕರ ಚಡಪಡಿಕೆ ಇನ್ನಷ್ಟು ಹೆಚ್ಚಾಗಿದೆ. 17 ಶಾಸಕರು ತಮ್ಮನ್ನು ಅನರ್ಹಗೊಳಿಸಿರುವ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದರು. ಆ ಕುರಿತ ವಿಚಾರಣೆ ಇದೀಗ ನ್ಯಾಯಮೂರ್ತಿ ಎನ್​ ವಿ ರಮಣ ಒಳಗೊಂಡ ತ್ರಿಸದಸ್ಯ ಪೀಠ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ.

ಸುಪ್ರೀಂ ಕೋರ್ಟ್​ನಲ್ಲಿ ಇಂದು ಅನರ್ಹ ಶಾಸಕರ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್​ ರೋಹ್ಟಗಿ “ಚುನಾವಣಾ ಆಯೋಗದಿಂದ ಮರು ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಅನರ್ಹ ಶಾಸಕರ ರಾಜೀನಾಮೆ ಅಂಗೀಕಾರವಾಗಿಲ್ಲ, ಬದಲಿಗೆ ಅವರನ್ನು ಅನರ್ಹಗೊಳಿಸಲಾಗಿದೆ. ಅನರ್ಹರ ವಿಚಾರದಲ್ಲಿ ನ್ಯಾಚುರಲ್​ ಜಸ್ಟೀಸ್​ ಫಾಲೋ ಆಗಿಲ್ಲ. ಕನಿಷ್ಟ 7 ದಿನ ಅವಕಾಶ ನೀಡಿ ಶಾಸಕರ ವಾದ ಕೇಳಬೇಕಿತ್ತು. ಆದರೆ, 3 ದಿನ ಮಾತ್ರ ಅವಕಾಶ ನೀಡಲಾಗಿತ್ತು.

ಸುಪ್ರೀಂ ಕೋರ್ಟ್​ ವಿನಾಯಿತಿ ಇದ್ದುದರಿಂದ ಶಾಸಕರು ಸದನಕ್ಕೆ ಹಾಜರಾಗಿರಲಿಲ್ಲ. ಹೀಗಾಗಿ ಸದನಕ್ಕೆ ಗೈರಾಗಿದ್ದು ವಿಪ್ ಉಲ್ಲಂಘನೆ ಹೇಗಾಗುತ್ತದೆ? ಎಂದು ಗಂಭೀರ ಪ್ರಶ್ನೆ ಎತ್ತಿದ್ದಾರೆ. ಅಲ್ಲದೆ, ರಾಜೀನಾಮೆ ಸ್ವಯಂ ಪ್ರೇರಿತವಾಗಿದ್ದರೆ ಸಾಕು. ಅನರ್ಹರ ಪಕ್ಷ ವಿರೋಧಿ ಚಟುವಟಿಕೆಗಳಿಗೆ ಸಾಕ್ಷಿ ಇಲ್ಲ. ಆದರೆ, ಸ್ಪೀಕರ್ ಕಾನೂನು ಬಾಹಿರವಾಗಿ ಬೇರೆ ಕಾರಣ ನೀಡಿ ಅತೃಪ್ತ ಶಾಸಕರನ್ನು ಅನರ್ಹಗೊಳಿಸಿದ್ದಾರೆ. ಹೀಗಾಗಿ ಅನರ್ಹ ಶಾಸಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೊಡಿ ಸೆಪ್ಟೆಂಬರ್​.30 ಕಡೆಯ ದಿನವಾಗಿರುವುದರಿಂದ ಹೆಚ್ಚು ಸಮಯ ಇಲ್ಲ” ಎಂದು ಮನವಿ ಮಾಡಿದ್ದಾರೆ.

ನ್ಯಾಯಾಲಯದಲ್ಲಿ 361/b ವಿಧಿಯ ಕುರಿತು ಉಲ್ಲೇಖಿಸಿರುವ ಮುಕುಲ್ ರೋಹ್ಟಗಿ, ಈ ವಿಧಿಯಲ್ಲಿ ಪಕ್ಷಾಂತರದ ಕುರಿತು ಉಲ್ಲೇಖವಿಲ್ಲ. ಆದರೆ, ಅನರ್ಹರಾದವರು ಅವಧಿ ಮುಗಿಯುವವರೆಗೆ ಲಾಭದಾಯಕ ಹುದ್ದೆಯಲ್ಲಿ ಮುಂದುವರೆಯುವಂತಿಲ್ಲ ಎಂದಷ್ಟೇ ಹೇಳಲಾಗಿದೆ. ಹೀಗಾಗಿ ಈ ಪ್ರಕರಣವನ್ನು ಶೀಘ್ರವಾಗಿ ಇತ್ಯರ್ಥಗೊಳಿಸಿ ಇಲ್ಲವೆ, 2015ರಲ್ಲಿ ಹೈದ್ರಾಬಾದ್​ ಹೈಕೋರ್ಟ್​ ಉಪ ಚುನಾವಣೆಗೆ ತಡೆ ನೀಡಿದಂತೆ ಇಂದು ಸುಪ್ರೀಂ ಕೋರ್ಟ್​ ಸಹ ಚುನಾವಣೆಗೆ ತಡೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಆದರೆ, ಕೆಪಿಸಿಸಿ ಪರ ಪ್ರತಿವಾದ ಮಂಡಿಸಿದ ಮತ್ತೋರ್ವ ಹಿರಿಯ ವಕೀಲ ಕಪಿಲ್ ಸಿಬಲ್, “ಅನರ್ಹರಿಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅವಕಾಶ ನೀಡಬಾರದು. ಚುನಾವಣೆ ಆಯೋಗ ಭಾಗೀದಾರರಲ್ಲ ಹೀಗಾಗಿ ಅನರ್ಹರ ಕುರಿತು ಅಭಿಪ್ರಾಯ ನೀಡಬಾರದು ಎಂದು ತಾಕೀತು ಮಾಡಿದ್ದಾರೆ. ಅಲ್ಲದೆ, ಈ ಕುರಿತು ವಿಸ್ಕೃತ ಚರ್ಚೆಯ ಅಗತ್ಯವಿದ್ದು, ಈ ಪ್ರಕರಣವನ್ನು ಮುಂದಿನ ವಾರಕ್ಕೆ ಮುಂದೂಡಬೇಕು ಎಂದು ಸುಪ್ರೀಂ ಕೋರ್ಟ್​ ಎದುರು ಮನವಿ ಮಾಡಿದ್ದಾರೆ.

ಅನರ್ಹರ ಪರ ತಾವು ಭಾಗೀದಾರರಾಗಲು ಸಿದ್ಧ, ಅವರು ಚುನಾವಣೆಗೆ ಸ್ಪರ್ಧಿಸಲು ನಮ್ಮ ತಕರಾರು ಇಲ್ಲ ಎಂದು ಚುನಾವಣಾ ಆಯೋಗದ ಪರ ವಕೀಲ ರಾಕೇಶ್​ ದ್ವಿವೇದಿ ಕೋರ್ಟ್​ ಎದುರು ಸ್ಪಷ್ಟನೆ ನೀಡಿದ್ದಾರೆ. ಆದರೂ, ನ್ಯಾಯಾಲಯ ಅನರ್ಹರ ಕುರಿತ ಅರ್ಜಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ. ಹೀಗಾಗಿ ಅನರ್ಹರಿಗೆ ಸದ್ಯಕ್ಕಂತು ರಿಲೀಫ್ ಸಿಗುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ.

error: Content is protected !! Not allowed copy content from janadhvani.com