janadhvani

Kannada Online News Paper

ಬಹ್ರೈನ್‌: ದೇಶೀಕರಣದ ಪ್ರಮಾಣವನ್ನು ಹೆಚ್ಚಿಸಲು ಚಿಂತನೆ

ಮನಾಮ: ಬಹ್ರೈನ್‌ನ ದೇಶೀಕರಣದ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ಸರಕಾರದೊಂದಿಗೆ ಸಮನ್ವಯ ಸಾಧಿಸಲು ಸರ್ಕಾರಿ ಸಂಸ್ಥೆಗಳು ಜಂಟಿಯಾಗಿ ಕೆಲಸ ಮಾಡಲಿದೆ ಎಂದು ಕಾರ್ಮಿಕ ಮಾರುಕಟ್ಟೆ ನಿಯಂತ್ರಣ ಪ್ರಾಧಿಕಾರ ಹೇಳಿದೆ. ದೇಶದಲ್ಲಿ ಸ್ಥಳೀಯರ ಉದ್ಯೋಗಾವಕಾಶವು ಶೇಕಡಾ 30 ರಷ್ಟು ಹೆಚ್ಚಾಗಿದೆ ಎಂದು ಪ್ರಾಧಿಕಾರ ವ್ಯಕ್ತಪಡಿಸಿದೆ.

ಕಾರ್ಮಿಕ ಮಾರುಕಟ್ಟೆ ನಿಯಂತ್ರಣ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಉಸಾಮಾ ಬಿನ್ ಅಬ್ದುಲ್ಲಾ ಅಲ್-ಅಬ್ಸಿ ಮಾತನಾಡಿ, ಮೂಲ ನಿವಾಸಿಗಳಿಗೆ ಉದ್ಯೋಗವನ್ನು ಖಾತ್ರಿಪಡಿಸಿಕೊಳ್ಳಲು ಸರ್ಕಾರವು ವ್ಯವಸ್ಥೆಗಳ ಕಾರ್ಯವನ್ನು ಸುಧಾರಿಸಿದೆ. ಈ ನಿಟ್ಟಿನಲ್ಲಿ, ಕಾರ್ಮಿಕ ಮತ್ತು ಸಮಾಜ ಕಲ್ಯಾಣ ಸಚಿವಾಲಯ, ‘ತಮ್ಕೀನ್’ ಕಾರ್ಮಿಕ ನಿಧಿ ಸೇರಿದಂತೆ ಎಲ್ಲಾ ಸರ್ಕಾರಿ ಸಚಿವಾಲಯಗಳು ಮತ್ತು ಏಜೆನ್ಸಿಗಳ ಸಹಭಾಗಿತ್ವದಲ್ಲಿ ಎಲ್ಎಂಆರ್ಎ ಕಾರ್ಯನಿರ್ವಹಿಸುತ್ತದೆ.

ವಿಶೇಷ ತರಬೇತಿ ಕಾರ್ಯಕ್ರಮಗಳನ್ನು ಪರಿಚಯಿಸುವ ಮೂಲಕ ಸರಕಾರಿ ಮತ್ತು ಖಾಸಗಿ ಕ್ಷೇತ್ರಗಳಲ್ಲಿನ ಸ್ಥಳೀಯ ಪದವೀಧರರು ಉದ್ಯೋಗ ಪಡೆಯುತ್ತಿದ್ದಾರೆ. ಕಾರ್ಮಿಕ ಸಚಿವಾಲಯದಲ್ಲಿ ನೋಂದಾಯಿತ ಉದ್ಯೋಗಾಕಾಂಕ್ಷಿಗಳಿಗೆ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಉಸಾಮಾ ಅಲ್-ಅಬ್ಸಿ ಹೇಳಿದರು.

ವಿವಿಧ ಉದ್ಯೋಗಗಳಲ್ಲಿ ಉಚಿತವಾಗಿ ತರಬೇತಿ ನೀಡುವ ಮೂಲಕ ಉತ್ತಮ ಉದ್ಯೋಗಾಕಾಂಕ್ಷಿಗಳನ್ನು ಸೃಷ್ಟಿಸುವಗೋಸ್ಕರ ಈ ತರಬೇತಿ ನಡೆಸಲಾಗಿದೆ ಎಂದು ಅವರು ಹೇಳಿದರು. ಗೊತ್ತುಪಡಿಸಿದ ಪ್ರದೇಶಗಳಲ್ಲಿ ದೇಶೀಯ ಉದ್ಯೋಗಾಕಾಂಕ್ಷಿಗಳು ಲಭಿಸದಿದ್ದಲ್ಲಿ ಮಾತ್ರ ವಿದೇಶಿ ಪ್ರಜೆಗಳಿಗೆ ಕೆಲಸದ ಪರವಾನಗಿ ಲಭ್ಯವಿದೆ ಎಂದು ಉಸಾಮಾ ಅಲ್-ಅಬ್ಸಿ ಹೇಳಿದರು.