janadhvani

Kannada Online News Paper

ಬಿಜೆಪಿ ಸರ್ಕಾರದಲ್ಲಿ ಭಿನ್ನಮತ ಸ್ಫೋಟ- ಸಚಿವ ಸ್ಥಾನಕ್ಕೆ ಸಿ.ಟಿ.ರವಿ ರಾಜೀನಾಮೆ

ಬೆಂಗಳೂರು: ರಾಜ್ಯದಲ್ಲಿ ಮೈತ್ತಿ ಸರ್ಕಾರವನ್ನು ಬೀಳಿಸಿ ಅಧಿಕಾರವನ್ನು ಹಿಡಿದಿರುವ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆಯಲ್ಲಿ ಭಿನ್ನಮತ ಸ್ಪೋಟಗೊಂಡಿದ್ದು, ಪ್ರಮುಖ ಖಾತೆ ಸಿಗದ ಹಿನ್ನೆಲೆಯಲ್ಲಿ ಹಾಗೂ ಖಾತೆಗಳ ಅಸಮರ್ಪಕ ಹಂಚಿಕೆಯಿಂದ ಅಸಮಾಧಾನಗೊಂಡ ಸಿ.ಟಿ.ರವಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಸೋಮವಾರ ಸಂಜೆಯಷ್ಟೇ ಸಿ.ಟಿ.ರವಿ ಅವರಿಗೆ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಖಾತೆಗಳನ್ನು ಹಂಚಿಕೆ ಮಾಡಲಾಗಿತ್ತು. ಆದರೆ, ತಮಗೆ ಪ್ರಮುಖವಲ್ಲದ ಖಾತೆ ಹಂಚಿಕೆ ಮಾಡಿರುವುದರಿಂದ ಅಸಮಾಧಾನಗೊಂಡ ಸಿ.ಟಿ.ರವಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.ಸಿಎಂ ಯಡಿಯೂರಪ್ಪ ಅವರಿಗೆ ರಾಜೀನಾಮೆ ಪತ್ರ ರವಾನಿಸಿರುವ ಸಿ.ಟಿ.ರವಿ, ನನ್ನ ರಾಜೀನಾಮೆಯನ್ನು ಸ್ವೀಕರಿಸಿ, ಈ ಸ್ಥಾನವನ್ನು ಅಸಮಾಧಾನಿತ ಶಾಸಕರು ಹಾಗೂ ಸಚಿವಾಕಾಂಕ್ಷಿಗಳಿಗೆ ನೀಡಿ ಎಂದು ಪತ್ರದಲ್ಲಿ ಹೇಳಿದ್ದಾರೆ.

ಉಪಮುಖ್ಯಮಂತ್ರಿ ಸ್ಥಾನ ನೀಡಿರುವುದಕ್ಕೆ ವಿರೋಧ:

ಅಶ್ವತ್ಥ್ ನಾರಾಯಣ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿರುವುದಕ್ಕೆ ಬೆಂಗಳೂರು ಶಾಸಕರಿಂದಲೂ ವಿರೋಧ ವ್ಯಕ್ತವಾಗಿದೆ. ಪ್ರಮುಖವಾಗಿ ಆರ್.ಅಶೋಕ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ನೂತನ ಸಚಿವರಿಗೆ ಖಾತೆ ಹಂಚಿಕೆಯಾದ ಬಳಿಕ ನಡೆದ ಮೊದಲ ಸಚಿವ ಸಂಪುಟ ಸಭೆಗೆ 45 ನಿಮಿಷ ತಡವಾಗಿ ಆಗಮಿಸಿದ ಅಶೋಕ್ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಸರ್ಕಾರ ಮೇಲೆ ಬಿ.ಎಲ್.ಸಂತೋಷ್ ಹಿಡಿತಕಕ್ಕೆ ಹಿರಿಯ ನಾಯಕರಾದ ಜಗದೀಶ್ ಶೆಟ್ಟರ್ ಹಾಗೂ ಕೆ.ಎಸ್. ಈಶ್ವರಪ್ಪ ಸೇರಿ ಹಲವು ಪ್ರಮುಖ ಶಾಸಕರ ಭಾರೀ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೋತಿರುವ ಲಕ್ಷ್ಮಣ ಸವದಿಯನ್ನು ಸಚಿವರನ್ನಾಗಿ ಮಾಡಿದ್ದಲ್ಲದೇ, ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿರುವುದು ಇವರೆಲ್ಲರ ಅಸಮಾಧಾನಕ್ಕೆ ಕಾರಣವಾಗಿದೆ.

ಕೆ.ಎಸ್.ಈಶ್ವರಪ್ಪ ಮತ್ತು ಬಿ.ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡದೆ ಇರುವುದಕ್ಕೆ ಸಮುದಾಯ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಈಶ್ವರಪ್ಪ ಅವರ ಪರ ರಾಯಣ್ಣ ಬ್ರಿಗೇಡ್ ಹಾಗೂ ಶ್ರೀರಾಮುಲು ಪರ ವಾಲ್ಮೀಕಿ ಸಮುದಾಯದವರು ದನಿ ಎತ್ತಿದ್ದು, ಕೂಡಲೇ ಆಗಿರುವ ತಪ್ಪನ್ನು ಸರಿಪಡಿಸಿಕೊಂಡು ತಮ್ಮ ಮುಖಂಡರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಆಗ್ರಹಿಸಿವೆ. ಇಲ್ಲದಿದ್ದಲ್ಲಿ ಉಗ್ರ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿವೆ.