janadhvani

Kannada Online News Paper

ಪರಿಹಾರ ನೀಡಲು ನೋಟ್ ಪ್ರಿಂಟಿಂಗ್ ಮೆಷಿನಿಲ್ಲ: ಸಂತ್ರಸ್ತರನ್ನು ಅವಮಾನಿಸಿದ ಸಿ.ಎಂ- ಸಿದ್ದರಾಮಯ್ಯ ಆಕ್ರೋಶ

ಬೆಂಗಳೂರು: ನೀವು ಕೇಳಿದಷ್ಟು ಅನುದಾನ ಕೊಡಲು ಸರ್ಕಾರದ ಬಳಿ ನೋಟ್ ಪ್ರಿಂಟ್ ಮಾಡುವ ಯಂತ್ರ ಇಲ್ಲವೆಂದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿಕೆಯ ವಿರುದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಹರಿಹಾಯ್ದಿವೆ.

ಬೆಳೆ ಹಾನಿ ಅಂದಾಜು ಮಾಡಲು ಆತುರ ಬೇಡ, ಕೇಳಿದಷ್ಟು ಹಣ ನೀಡಲು ಸರ್ಕಾರದ ಬಳಿ ನೋಟು ಮುದ್ರಿಸುವ ಯಂತ್ರಗಳಿಲ್ಲ ಎಂದು ಯಡಿಯೂರಪ್ಪ ಶಿವಮೊಗ್ಗದಲ್ಲಿ ಕೃಷಿ ಅಧಿಕಾರಿಗಳಿಗೆ ಸೂಚಿಸಿದ್ದರು, ಈ ಸಂಬಂಧ ಯಡಿಯೂರಪ್ಪ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಯಡಿಯೂರಪ್ಪನವರ ಹೇಳಿಕೆಯ ವಿರುದ್ದ ಇಂಗ್ಲಿಷ್ ನಲ್ಲಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ,”ಸಂತ್ರಸ್ತರ ಪರಿಹಾರಕ್ಕೆ ನೋಟ್ ಪ್ರಿಂಟಿಂಗ್ ಮೆಷಿನ್ ಇಲ್ಲ ಎನ್ನುವ ಮುಖ್ಯಮಂತ್ರಿಗಳಿಗೆ, ಅತೃಪ್ತ ಶಾಸಕರಿಗೆ ಕೊಡಲು ಅಕ್ಷಯಪಾತ್ರೆ ಫಂಡ್ ಇದೆ” ಎಂದು ವ್ಯಂಗ್ಯವಾಡಿದ್ದಾರೆ.

ಬಿಎಸ್ ಯಡಿಯೂರಪ್ಪನವರೇ ಯಾವ ರೀತಿಯ ತಿರುಕನ ಶೋಕಿ ನಿಮ್ಮದು, ಪ್ರವಾಹ ಪೀಡಿತ ಪ್ರದೇಶಗಳಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿಲ್ಲ, ಪ್ರವಾಹ ವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿಲ್ಲ, ಕೇಂದ್ರ ಸರ್ಕಾರ 5 ಸಾವಿರ ಕೋಟಿ ರೂ ಪರಿಹಾರ ಹಣ ಬಿಡುಗಡೆ ಮಾಡಿಲ್ಲ, ಆದರೆ ಯಾವುದೇ ಕೆಲಸ ಮಾಡದೇ ಜಾಹೀರಾತುಗಳಿಗೆ ಬೇಕಾದಷ್ಟು ಹಣ ನೀಡುತ್ತಾರೆ, ಹಣ ಇಲ್ಲ ಎನ್ನುವ ಮೂಲಕ ಸಂತ್ರಸ್ತರಿಗೆ ಅವಮಾನ ಮಾಡಿದ್ದಾರೆ ಎಂದು ಹೇಳಿದ್ದಾರೆ.


ಇನ್ನೂ ಈ ಸಂಬಂಧ ಟ್ವೀಟ್ ಮಾಡಿರುವ ಜೆಡಿಎಸ್, ಮನೆ-ಆಸ್ತಿ ಕಳೆದುಕೊಂಡು ನಿರಾಶ್ರಿತರಾದ ನೆರೆ ಸಂತ್ರಸ್ತರಿಗೆ ಸೂರು ಕಲ್ಪಿಸಲು ಬೇಡಿದರೆ, “ಹಣ ನೀಡಲು ಸರ್ಕಾರದಲ್ಲಿ ನೋಟ್ ಪ್ರಿಂಟ್ ಮಾಡುವ ಯಂತ್ರವಿಲ್ಲ” ಎಂದಿದ್ದಾರೆ. ಹಾಗಾದರೆ, ಅನರ್ಹ ಅತೃಪ್ತ ಶಾಸಕರಿಗೆ ವಿಶೇಷ ವಿಮಾನ, ಸ್ಟಾರ್ ಹೋಟೆಲ್ ವಾಸ್ತವ್ಯ ಕಲ್ಪಿಸಲು ನೋಟ್ ಪ್ರಿಂಟ್ ಮಾಡಿಕೊಟ್ಟವರು ಯಾರು? ಎಂದು ಪ್ರಶ್ನಿಸಿದೆ.

error: Content is protected !! Not allowed copy content from janadhvani.com