ಮಂಗಳೂರು: ದಕ್ಷಿಣ ಕನ್ನಡ ಮತ್ತು ಹಾಸನ ಜಿಲ್ಲೆಗಳ ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 234ರ ಮಾರ್ಗದ ಚಾರ್ಮಾಡಿ ಘಾಟಿಯಲ್ಲಿ ಒಂಬತ್ತು ಸ್ಥಳಗಳಲ್ಲಿ ಭೂಕುಸಿತ ಸಂಭವಿಸಿದೆ. ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ಬಂದ್ ಮಾಡಲಾಗಿದೆ.
ಮಂಗಳವಾರ ರಾತ್ರಿ 7.30ರ ಬಳಿಕ ಒಂಬತ್ತು ಕಡೆ ಗುಡ್ಡ ಕುಸಿದು ರಸ್ತೆಯ ಮೇಲೆ ಬಿದ್ದಿದೆ. ವಾಹನಗಳು ಸಂಚರಿಸಲು ಸಾಧ್ಯವಾಗುತ್ತಿಲ್ಲ. ಭೂಕುಸಿತ ಮುಂದುವರಿದಿದ್ದು, ತೆರವು ಕಾರ್ಯಾಚರಣೆಗೂ ಅಡ್ಡಿಯಾಗಿದೆ.
‘ಈ ಮಾರ್ಗದಲ್ಲಿ ಸಿಲುಕಿದ್ದ ಎಲ್ಲ ವಾಹನಗಳನ್ನು ರಾತ್ರಿ 11.30ರ ವೇಳೆಗೆ ಸುರಕ್ಷಿತವಾಗಿ ಹೊರಗೆ ಕಳುಹಿಸಲಾಗಿದೆ. ತೆರವು ಕಾರ್ಯಾಚರಣೆಯಲ್ಲಿದ್ದ ಸಿಬ್ಬಂದಿ ನಸುಕಿನ ಜಾವ 3 ಗಂಟೆ ಸುಮಾರಿಗೆ ಘಾಟಿಯಿಂದ ಹೊರಗೆ ಬಂದಿದ್ದಾರೆ’ ಎಂದು ಬೆಳ್ತಂಗಡಿ ತಾಲ್ಲೂಕು ತಹಶೀರ್ ಗಣಪತಿ ಶಾಸ್ತ್ರಿ ತಿಳಿಸಿದರು.
ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಎರಡು ದಿನಗಳ ಕಾಲ ವಾಹನ ಸಂಚಾರ ಬಂದ್ ಮಾಡಲು ತಾತ್ಕಾಲಿಕವಾಗಿ ನಿರ್ಧಾರ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿಯವರು ಪರಿಸ್ಥಿತಿ ಅವಲೋಕಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.