janadhvani

Kannada Online News Paper

ದುಬೈ-ಮುಂಬೈ ನಡುವೆ ಸೇವೆ ಆರಂಭಿಸಲಿದೆ ‘ಏರ್ ವಿಸ್ತಾರ’

ದುಬೈ: ಭಾರತೀಯ ವಿಮಾನ ಕಂಪೆನಿ ಏರ್ ವಿಸ್ತಾರವು ದುಬೈ ಗೆ ತನ್ನ ಸೇವೆಯನ್ನು ವಿಸ್ತರಿಸಿದೆ. ಮುಂಬೈನಿಂದ ಆಗಸ್ಟ್ 21ರಿಂದ ಅದು ಸೇವೆ ಪ್ರಾರಂಭಿಸಲಿದ್ದು, ದುಬೈ-ಮುಂಬೈ ನಡುವೆ ಪ್ರತಿದಿನ ಹಾರಾಟ ನಡೆಸಲಿದೆ.

ಇದು ಏರ್ ವಿಸ್ತಾರದ ಎರಡನೇ ಅಂತರ್‌ರಾಷ್ಟ್ರೀಯ ಹಾರಾಟವಾಗಿದ್ದು, ಪ್ರತಿದಿನ ಸಂಜೆ 4:25ಕ್ಕೆ ಮುಂಬೈಯಿಂದ ಹೊರಡುವ ವಿಮಾನವು ಯುಎಇ ಸಮಯ 6:15ಕ್ಕೆ ದುಬೈ ತಲುಪಲಿದೆ. ರಾತ್ರಿ 7:15ಕ್ಕೆ ದುಬೈಯಿಂದ ಹೊರಟು, ರಾತ್ರಿ 12:15 ಕ್ಕೆ ಮುಂಬೈ ತಲುಪಲಿದೆ. ಉದ್ಘಾಟನೆ ಪ್ರಯುಕ್ತ ದುಬೈಗೆ ಹೋಗಿ ಮರಳುವ(ಟು ವೇ) ಎಕಾನಮಿಕ್ ಟಿಕೆಟ್ 17,820 ರೂ.ಗೆ ವಿನಾಯಿತಿ ದರದಲ್ಲಿ ದೊರೆಯಲಿದೆ.

ಕಳೆದ ತಿಂಗಳು ಏರ್ ವಿಸ್ತಾರವು ತನ್ನ ಪ್ರಥಮ ಅಂತರ್‌ರಾಷ್ಟ್ರೀಯ ಹಾರಾಟವನ್ನು ಸಿಂಗಾಪುರಕ್ಕೆ ಪ್ರಾರಂಭಿಸಿತ್ತು. ಸಿಂಗಾಪುರ್ ಏರ್ಲೈನ್ಸ್ ಮತ್ತು ಟಾಟಾ ಸಹಯೋಗದೊಂದಿಗೆ ಪ್ರಾರಂಭಗೊಂಡ ಏರ್ ವಿಸ್ತಾರ ಮೂರು ವರ್ಷದಿಂದ ಭಾರತದಾದ್ಯಂತ ಹಾರಾಟ ನಿರತವಾಗಿದೆ.