ಬೆಂಗಳೂರು : ವಲಸಿಗರನ್ನು ಯೂರೋಪಿನಿಂದ ಹೊರಗಟ್ಟಿ ಎನ್ನುವ ಮೂಲಕ ತನ್ನ ಧಾರ್ಮಿಕ ದಿವಾಳಿತನವನ್ನು ತೋರಿಸಿದ ದಲೈಲಾಮರನ್ನು ಚೀನಾಕ್ಕೆ ಕಳುಹಿಸುವುದು ಒಳಿತು. ವಲಸಿಗರು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಬಂದು ಅವರ ನೆಲೆಯನ್ನು ಗಟ್ಟಿಗೊಳಿಸಿರುವುದು ಮಾತ್ರವಲ್ಲ, ಸಂಸಾರ ನೌಕೆಯನ್ನು ಮುಂದೂಡಲು ಬೇಕಾದ ಆಶ್ರಯವನ್ನು ಕಂಡುಕೊಂಡಿದ್ದಾರೆ.
ಭಾರತದಲ್ಲಿ ಬಾಂಗ್ಲಾ, ಮಯನ್ಮಾರ್, ಚೀನಾ, ಮಂಗೋಲಿ ಮುಂತಾದ ರಾಷ್ಟ್ರಗಳಿಂದ ವಲಸೆ ಬಂದ ಲಕ್ಷಾಂತರ ವಲಸಿಗರು ಜೀವನ ಸಾಗಿಸುತ್ತಿದ್ದಾರೆ. ಒಂದು ದೇಶದಲ್ಲಿ ನೆಲೆಸಿರುವಾಗ ಆಯಾಯ ದೇಶದ ಕಾನೂನಿಗೆ ಬದ್ಧರಾಗಿರಬೇಕಾದುದು ಎಲ್ಲರ ಕರ್ತವ್ಯ. ಕರ್ತವ್ಯ ಪ್ರಜ್ಞೆಯಲ್ಲಿ ಬದುಕುವವರು ಯಾವತ್ತೂ ಯಾವ ದೇಶಕ್ಕೂ ಮಾರಕ ಮತ್ತು ಆತಂಕ ಸೃಷ್ಟಿಸಲು ಸಾಧ್ಯವಿಲ್ಲ. ಭಾರತದಲ್ಲಿ ನೆಲೆಸಿರುವ ವಲಸಿಗರು ದೇಶ ಕಟ್ಟುವ ಕಾಯಕದಲ್ಲಿ ನಮ್ಮೊಂದಿಗೆ ಕೈ ಜೋಡಿಸಿದ ಹಾಗೆ ಯುರೋಪಿನ ವಿವಿಧ ದೇಶಗಳಲ್ಲಿ ವಲಸೆ ಹೋದ ಭಾರತೀಯರ ಸಮೇತ ಹಲವರು ಯುರೋಪ್ ಕಟ್ಟುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಈ ನಿಟ್ಟಿನಲ್ಲಿ ಬೌದ್ಧ ಧಾರ್ಮಿಕ ನಾಯಕ ದಲೈಲಾಮರ “ವಲಸಿಗರನ್ನು ಓಡಿಸಿ, ಇಲ್ಲದಿದ್ದಲ್ಲಿ ಯುರೋಪ್ ಮತ್ತೊಂದು ಆಫ್ರಿಕನ್ ಮುಸ್ಲಿಂ ರಾಷ್ಟ್ರವಾಗಲಿದೆ” ಎಂಬ ಹೇಳಿಕೆ ಮಾನವೀಯತೆಯ ವಿರುದ್ಧ ಮಾತ್ರವಲ್ಲದೆ, ಧಾರ್ಮಿಕ ನೈತಿಕತೆಯ ದಿವಾಳಿತನ ಕೂಡ ಆಗಿದೆ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಮೌಲಾನ ಎನ್.ಕೆ.ಎಂ ಶಾಫಿ ಸಅದಿ ಹೇಳಿದರು.
ಚೀನಾದ ವಿರೋಧದ ನಡುವೆಯೂ ಕಳೆದ 60 ವರ್ಷಗಳಿಂದ ಭಾರತದಲ್ಲಿ ವಲಸಿಗರಾಗಿ ನೆಲೆಸಿರುವ ದಲೈಲಾಮರನ್ನು ಮತ್ತೊಮ್ಮೆ ಚೀನಾಕ್ಕೆ ಕಳುಹಿಸಿದರೆ ಅದರ ನೋವು ಅವರಿಗೂ ಅರ್ಥವಾಗಬಹುದು ಎಂದು ಅವರು ಅಭಿಪ್ರಾಯಪಟ್ಟರು.