janadhvani

Kannada Online News Paper

ಪಡಿತರ ಚೀಟಿ – ಆಧಾರ್‌ ದೃಢೀಕರಣ(E-KYC) ತಾತ್ಕಾಲಿಕ ರದ್ಧು

ಬೆಂಗಳೂರು: ಪಡಿತರ ಚೀಟಿದಾರ ಕುಟುಂಬದ ಸದಸ್ಯರ ಆಧಾರ್‌ ದೃಢೀಕರಣ (ಇ-ಕೆವೈಸಿ) ಮಾಡಿಕೊಳ್ಳುವುದನ್ನು ಜುಲೈ 15ರವರೆಗೆ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಆದೇಶ ಹೊರಡಿಸಿದೆ.

ಈ ಹಿಂದೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸೂಚನೆ ನೀಡಿ, ಜುಲೈ 31ರೊಳಗೆ ಇ-ಕೆವೈಸಿ ಮಾಡಿಸಿಕೊಳ್ಳದ ಸದಸ್ಯರಿಗೆ ಪಡಿತರ ವಿತರಣೆ ನಿಲ್ಲಿಸುವುದಾಗಿ ಆದೇಶಿಸಿತ್ತು ಆದರೆ ಈಗ ಇ-ಕೆವೈಸಿ ಮತ್ತು ಪಡಿತರ ವಿತರಣೆಯನ್ನು ಒಂದೇ ಸಮಯದಲ್ಲಿ ಮಾಡುತ್ತಿದ್ದ ಕಾರಣ ತಾಂತ್ರಿಕ ದೋಷ (ಸರ್ವರ್‌ಡೌನ್‌) ಕಂಡು ಬರುತ್ತಿರುವ ಹಿನ್ನಲೆಯಲ್ಲಿ ಪದೇ ಪದೇ ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಗೆ ಬರಬೇಕಾಗಿತ್ತು.

ಹೀಗಾಗಿ ಇ-ಕೆವೈಸಿ ಅಥವಾ ಪಡಿತರ ವಿತರಣೆ ನಿಲ್ಲಿಸಿ ತಾಂತ್ರಿಕ ದೋಷದ ಸಮಸ್ಯೆ ಸರಿಪಡಿಸುವಂತೆ ರಾಜ್ಯ ಪಡಿತರ ವಿತರಕರ ಸಂಘದ ಸದಸ್ಯರು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಆಯುಕ್ತರಲ್ಲಿ ಮನವಿ ಮಾಡಿದ್ದರು ಈ ಹಿನ್ನಲೆಯಲ್ಲಿ ಆಯುಕ್ತರು ಇ-ಕೆವೈಸಿ ನೋಂದಣಿ ಮತ್ತು ಪಡಿತರ ವಿತರಣೆ ಅವಧಿಯಲ್ಲಿ ಬದಲಾವಣೆ ಮಾಡಿ ಆದೇಶಿಸಿದ್ದಾರೆ.

ಈ ನಡುವ ಆಹಾರ ಇಲಾಖೆಯ ಆಯುಕ್ತರ ನಿರ್ದೇಶನದಂತೆ ಕೂಡಲೇ ಇ-ಕೆವೈಸಿ ಸಂಗ್ರಹ ನಿಲ್ಲಿಸಬೇಕು. ಜೂನ್‌ ಮಾಹೆಯ ಪಡಿತರ ವಿತರಣೆಯನ್ನು ಅತ್ಯಂತ ತುರ್ತಾಗಿ ಮುಕ್ತಾಯ ಮಾಡಬೇಕು. ಎಲ್ಲ ನ್ಯಾಯ ಬೆಲೆ ಅಂಗಡಿಗಳ ಮುಂದೆ ಈ ಸೂಚನೆಯನ್ನು ಸಾರ್ವಜನಿಕರ ಗಮನಕ್ಕೆ ತರಲು ಬೋರ್ಡು ಹಾಕಬೇಕು ಎಂದು ಎಲ್ಲ ತಾಲೂಕಿನ ತಹಸೀಲ್ದಾರ ಮತ್ತು ಶಿರಸ್ತೇದಾರರು, ನಿರೀಕ್ಷಕರಿಗೆ ಸೂಚಿಸಲಾಗಿದೆ ಎನ್ನಲಾಗಿದೆ.

error: Content is protected !! Not allowed copy content from janadhvani.com