ದುಬೈ, ಜೂ.17: ಶಾಲಾ ಬಸ್ಸಿನಲ್ಲೇ ಉಳಿದುಕೊಂಡಿದ್ದ ಕೇರಳದ 6 ವರ್ಷದ ಬಾಲಕನೊಬ್ಬ ಹಲವು ಗಂಟೆಗಳ ಕಾಲ ಒಬ್ಬಂಟಿಯಾಗಿದ್ದು,ಬಿಸಿಲಿನ ತಾಪದಿಂದ ಮೃತ ಪಟ್ಟ ಘಟನೆ ಅಲ್ ಖೂಸ್ ನಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.
ಇಲ್ಲಿನ ಅಲ್ ಮನಾರ್ ಖುರ್ ಆನ್ ಸ್ಟಡೀ ಸೆಂಟರ್ ನ ವಿದ್ಯಾರ್ಥಿ, ಕೇರಳದ ತಲಶ್ಶೇರಿ ಮುಝುಪಿಲಂಗಾಡ್ ಫೈಝಲ್ ಎಂಬವರ ಮಗ ಮುಹಮ್ಮದ್ ಫರ್ಹಾನ್ ಮೃತ ಪಟ್ಟ ಬಾಲಕ.
ಬೆಳಿಗ್ಗೆ ಎಂಟರ ಸುಮಾರಿಗೆ ಶಾಲಾವರಣ ಪ್ರವೇಶಿಸಿದ ಬಸ್ಸಿನಿಂದ ಇತರ ವಿದ್ಯಾರ್ಥಿಗಳು ಇಳಿದರೂ ಪೈಸಲ್ ಇಳಿದಿರಲಿಲ್ಲ.
ಇದರ ಅರಿವು ಬಾರದೆ ಚಾಲಕ ಮತ್ತು ನಿರ್ವಾಹಕ ಬಸ್ಸಿನ ಬಾಗಿಲ ಬೀಗ ಹಾಕಿ ತೆರಳಿದ್ದರು. ಗಂಟೆಗಳ ನಂತರ ಬಾಗಿಲು ತೆರೆದಾಗ ಬಿಸಿಲಿಗೆ ಬಾಡಿ ಹೋಗಿದ್ದ ಎಳೆ ಬಾಲಕನ ಮರಣ ಸಂಭವಿಸಿತ್ತು.ಮಧ್ಯಾಹ್ನ 3ರವೇಳೆಗೆ ಬಾಲಕ ಮೃತಪಟ್ಟಿರುವ ಬಗ್ಗೆ ದೂರು ಲಭಿಸಿದ್ದಾಗಿ ದುಬೈ ಪೊಲೀಸರು ಹೇಳಿದ್ದಾರೆ.
“ಮಕ್ಕಳನ್ನು ಮರಳಿ ಮನೆಗೆ ಕರೆದೊಯ್ಯಲು ಚಾಲಕ ಬಸ್ಸು ತೆರೆದಾಗ ಈತ ಮೃತಪಟ್ಟಿರುವುದು ಕಂಡುಬಂದಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ವಿವರಿಸಿದ್ದಾರೆ. ಈತನ ಪೋಷಕರು ದೀರ್ಘಕಾಲದಿಂದ ದುಬೈ ನಿವಾಸಿಗಳು. ತಂದೆ ಫೈಝಲ್, ಕೇರಳ ಹಾಗೂ ದುಬೈನಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ ಎನ್ನಲಾಗಿದೆ.