ಬೆಂಗಳೂರು: ರಾಜ್ಯದಲ್ಲಿ ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವ ಎಲ್ಲಾ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ನೀಡಲು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಚಿವ ಸಂಪುಟ ನಿರ್ಧರಿಸಿದೆ.
ಶುಕ್ರವಾರ ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು, ಪ್ರಸ್ತುತ ಪದವಿ ತರಗತಿಗಳಿಗೆ ಪ್ರವೇಶ ಪಡೆದಿರುವವರು ಹಾಗೂ ಈಗ 2ನೇ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಒಮ್ಮೆಗೇ ಲ್ಯಾಪ್‌ಟಾಪ್ ವಿತರಣೆಗೆ ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
ಹಿಂದಿನ ಸರಕಾರದಲ್ಲಿ ಪರಿಶಿಷ್ಟ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಣೆ ಮಾಡಲಾಗುತ್ತಿತ್ತು. ಇತರ ಎಲ್ಲಾ ವರ್ಗಗಳ ಪದವಿ ವಿದ್ಯಾರ್ಥಿಗಳಿಗೂ ಉಚಿತವಾಗಿ ಲ್ಯಾಪ್‌ಟಾಪ್ ವಿತರಣೆಗೆ 3 ವರ್ಷಗಳ ಹಿಂದೆ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಅನ್ಯ ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಈಗ ಹಿಂದಿನ ಸರ್ಕಾರದ ತೀರ್ಮಾನದಂತೆ 1 ಕೋಟಿ 916 ವಿದ್ಯಾರ್ಥಿಗಳಿಗೆ ತಕ್ಷಣದಿಂದ ಲ್ಯಾಪ್‌ಟಾಪ್ ವಿತರಣೆ ಪ್ರಕ್ರಿಯೆ ಆರಂಭಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.