ಅಜ್ಮಾನ್: ಕೆಲಸ ನೀಡುವ ಆಮಿಷ ನೀಡಿ ಯುವಕರನ್ನು ಸಂದರ್ಶಕ ವಿಸಾದಲ್ಲಿ ಗಲ್ಫ್‌ಗೆ ಕರೆತಂದು ವಂಚಿಸುವ ಜಾಲ ಇನ್ನೂ ಕಾರ್ಯಾಚರಿಸುತ್ತಿದ್ದು, ಕೇರಳದ ವಿವಿಧ ಕಡೆಯಿಂದ ಬಂದ ಯುವಕರು ಯುಎಇಯ ಅಜ್ಮಾನಿನಲ್ಲಿ ಯಾತನೆ ಅನುಭವಿಸುತ್ತಿದ್ದಾರೆ. ವಿಸಾಗಾಗಿ ಭಾರೀ ಮೊತ್ತದ ಹಣವನ್ನು ಏಜನ್ಸಿಗಳು ಇವರಿಂದ ಪಡೆದಿದ್ದಾರೆ ಎನ್ನಲಾಗಿದೆ. ತಿಂಗಳುಗಳು ಕಳೆದರೂ ಇವರಿಗೆ ಯಾವುದೇ ಕೆಲಸ ಸಿಗದಿದ್ದು, ಅಜ್ಮಾನ್ ಒಂದರಲ್ಲೇ ಸುಮಾರು ನೂರಕ್ಕಿಂತಲೂ ಹೆಚ್ಚು ಮಂದಿ ಸಿಲುಕಿಕೊಂಡಿದ್ದಾರೆ.
ಪೆರಿಂದಲ್ಮಣ್ಣಾದ ಕ್ಯಾಲಿಕೆಟ್ ಟ್ರಾವೆಲ್ಸ್, ಅಡೂರಿನ ಅಡೂರ್ ಜಾಬ್ಸ್, ವಂಡೂರಿನ ಬಿಸ್ಮಿ ಟ್ರಾವಲ್ಸ್ ಮುಂತಾದ ಸಂಸ್ಥೆಗಳಿಗೆ ಐವತ್ತು ಸಾವಿರದಿಂದ ಒಂದು ಲಕ್ಷದವರೆಗೆ ನೀಡಿ ಇವರ ಪೈಕಿ ಹೆಚ್ಚಿನವರು ಯುಎಇ ತಲುಪಿದ್ದಾರೆ. ಈ ಹಿಂದೆ ಇದೇ ತರಹದ ವಂಚೆನೆ ಮಾಡಿದ್ದ ಶಾಜಹಾನ್, ನೌಶಾದ್, ಜಯಪ್ರಕಾಶ್, ಮುಜೀಬ್ ಮುಂತಾದವರೇ ಯುಎಇಯಲ್ಲಿ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.
ಪ್ರಸಕ್ತ ಈ ಯುವಕರೂ ವಾಸವಿರುವ ಸ್ಥಳದಿಂದ ಹೊರದಬ್ಬಲ್ಪಡುವ ಶೋಚನೀಯ ಪರಿಸ್ಥಿತಿಯಲ್ಲಿದ್ದು, ಇಪ್ಪತ್ತು ಸಾವಿರ ಕೂಡ ಖರ್ಚಿಲ್ಲದೆ ಲಭಿಸುವ ವಿಸಾ ನೀಡಿ ಈ ಯುವಕರಿಂದ ಲಕ್ಷಾಂತರ ರೂ. ಪಡೆದು ವಂಚಿಸಲಾಗಿದೆ. ಈ ಬಗ್ಗೆ ಹಲವಾರು ಪ್ರಕರಣಗಳು ವರದಿಯಾಗುತ್ತಿದ್ದರೂ ವಂಚಿತರಾಗುವವರಿಗೆ ಯಾವುದೇ ಕೊರತೆ ಇಲ್ಲ ಎನ್ನಲಾಗಿದೆ.