ಪಾಟ್ನಾ: ಬಿಹಾರದಲ್ಲಿ ಎನ್ ಡಿಎ ಮೈತ್ರಿಕೂಟಕ್ಕೆ ಮೊಯ್ಯಿಗೆ ಮೊಯ್ಯಿ ಎಂಬ ರೀತಿಯಲ್ಲಿ ಭಾನುವಾರ ಸಚಿವ ಸಂಪುಟ ವಿಸ್ತರಣೆಯಾಗುತ್ತಿದ್ದು ನಿತೀಶ್ ಕುಮಾರ್ ನೇತೃತ್ವದ ಜೆಡಿಯುನಲ್ಲಿ 8 ಹೊಸ ಶಾಸಕರಿಗೆ ಸಚಿವ ಸ್ಥಾನ ನೀಡಲಾಗುತ್ತಿದೆ.
ಬಿಹಾರ ರಾಜ್ಯ ಸಂಪುಟದಲ್ಲಿ ಹಿರಿಯ ದಲಿತ ನಾಯಕ ಅಶೋಕ್ ಚೌಧರಿ, ಸಂಜಯ್ ಜ್ಹಾ, ನೀರಜ್ ಕುಮಾರ್, ಮಂಜು ಗೀತಾ ಮತ್ತು ರಾಮ್ ಸೇವಕ್ ರೈ ಅವರಿಗೆ ಸಂಪುಟ ಸಚಿವ ಸ್ಥಾನ ಸಿಗುತ್ತಿದ್ದು ಇಂದು ರಾಜ್ಯಪಾಲರು ನೂತನ ಸಚಿವರುಗಳಿಗೆ ಪ್ರಮಾಣವಚನ ಬೋಧಿಸುತ್ತಿದ್ದಾರೆ.
ಕಳೆದ ಗುರುವಾರ ದೆಹಲಿಯಲ್ಲಿ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಪ್ರಮಾಣವಚನ ಸ್ವೀಕರಾ ಸಮಾರಂಭ ವೀಕ್ಷಿಸಿ ರಾಜ್ಯಕ್ಕೆ ಆಗಮಿಸಿದ ನಂತರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸರ್ಕಾರದ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದರು. ಭವಿಷ್ಯದಲ್ಲಿ ಜೆಡಿಎಯು ಇನ್ನೆಂದಿಗೂ ಬಿಜೆಪಿ ಜೊತೆ ಸೇರುವುದಿಲ್ಲ ಎಂದು ಹೇಳಿದ್ದರು.ಕೇಂದ್ರದಲ್ಲಿ ಮೋದಿ ಸಂಪುಟದಲ್ಲಿ ಜೆಡಿಯುಗೆ ಕೇವಲ ಒಂದೇ ಒಂದು ಸಚಿವ ಸ್ಥಾನ ಸಿಕ್ಕಿರುವುದು ಈ ಅಸಮಾಧಾನಕ್ಕೆ ಕಾರಣವಾಗಿದೆ.
ಇದರಿಂದಾಗಿ ಇಂದು ನಡೆಯುತ್ತಿರುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಬಿಜೆಪಿಗೆ ಕೇವಲ ಒಂದು ಸೀಟುಗಳು ಮತ್ತು ಎಲ್ ಜೆಪಿಯ ಯಾವೊಬ್ಬ ಶಾಸಕರಿಗೆ ಸಹ ಮಣೆ ಹಾಕಲಾಗಿಲ್ಲ.
ಲೋಕಸಭಾ ಚುನಾವಣೆಯಲ್ಲಿ ಬಿಹಾರದಿಂದ ಪಕ್ಷ ಗೆದ್ದ ಸಂಸದರ ಸಂಖ್ಯೆಗೆ ಅನುಗುಣವಾಗಿ ಕೇಂದ್ರ ಸರ್ಕಾರದ ಸಚಿವ ಸಂಪುಟದಲ್ಲಿ ನಿರ್ದಿಷ್ಟ ಭಾಗವನ್ನು ನೀಡಬೇಕೆಂದು ನಿತೀಶ್ ಕುಮಾರ್ ಈ ಹಿಂದೆ ಒತ್ತಾಯಿಸಿದ್ದರು.