ಜೈಪುರ: ಬೇಸಿಗೆ ಧಗೆಗೆ ಉತ್ತರ ಭಾರತದ ರಾಜ್ಯಗಳು ತತ್ತರಿಸಿದ್ದು, ರಾಜಸ್ತಾನದಲ್ಲಿ ತಾಪಮಾನ ಹೊಸ ದಾಖಲೆ ಮಟ್ಟ ತಲುಪಿದೆ.
ರಾಜಸ್ಥಾನದಾದ್ಯಂತ ಬಿಸಿಲ ಬೇಗೆ ಮಿತಿ ಮೀರಿದ್ದು, ರಾಜಸ್ಥಾನದ ಚುರುವಿನಲ್ಲಿ ತಾಪಮಾನ 50.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ರಾಜಸ್ತಾನದ ಇತಿಹಾಸದಲ್ಲಿ ಇದು ಹೊಸ ದಾಖಲೆಯಾಗಿದ್ದು, ಈ ಹಿಂದೆ ಅಂದರೆ 2016ರ ಮೇ 19ರಂದು ಚುರುನಲ್ಲಿ ಶನಿವಾರ 50.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಇದು ಈವರೆಗಿನ ದಾಖಲೆಯಾಗಿತ್ತು. ಆದರೆ ಇಂದು ಅದನ್ನೂ ಮೀರಿದ ಉಷ್ಣಾಂಶ ದಾಖಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಹವಾಮಾನ ಇಲಾಖೆ ಅಧಿಕಾರಿಗಳು, ‘ಪಶ್ಚಿಮ ರಾಜಸ್ಥಾನ ಮತ್ತು ಪೂರ್ವ ರಾಜಸ್ಥಾನದಲ್ಲಿ ಮುಂದಿನ 5 ದಿನ ಕಟ್ಟೆಚ್ಚರದಿಂದ ಇರುವಂತೆ ತಿಳಿಸಿದ್ದಾರೆ. ಅಂತೆಯೇ ಪಶ್ಚಿಮ ರಾಜಸ್ಥಾನದ ಜೈಸಲ್ಮೇರ್, ಬಾರ್ಮರ್, ನಾಗೌರ್, ಬಿಕನೇರ್, ಹನುಮಾನ್ ಗಢ, ಚುರು, ಜೋಧ್ ಪುರ್, ಜಾಲೋರ್, ಅಜ್ಮೀರ್, ಅಳ್ವಾರ್, ಭರತ್ಪುರ್, ಬರಾನ್, ಬುಂಡಿ, ದೌಸಾ, ಢೋಲ್ಪುರ್, ಜೈಪುರ್, ಚಿತ್ತೋರ್ ಘಡ, ಜಲ್ವಾರ್, ಜುಂಜುನು, ಕರೌಲಿ, ಕೋಟ, ಶಿಖರ್, ಸವಾಯ್ ಮಾಧೋಪುರ್, ಟೋಂಕ್ ಮತ್ತು ಪಾಲಿಯಲ್ಲಿ ಜೂ.4ರವರೆಗೆ ಒಣಹವೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.