janadhvani

Kannada Online News Paper

ತನ್ನ ದೇಶದ ಮಕ್ಕಳ ಸಂರಕ್ಷಣೆಗೆ ತುರ್ತು ಕ್ರಮಕೈಗೊಳ್ಳಬೇಕು- ‘ಟ್ವಿಟರ್ ಗರ್ಲ್’ ಬನಾ ಅಲ್ ಆಬಿದ್

ಅಲೆಪ್ಪೊ : ‘ಟ್ವಿಟರ್ ಗರ್ಲ್’ ಎಂದು ಜನಪ್ರಿಯಳಾದ ಸಿರಿಯದ ಒಂಬತ್ತು ವರ್ಷದ ಬನಾ ಅಲ್ ಆಬಿದ್ ತನ್ನ ದೇಶದ ಮಕ್ಕಳನ್ನು ರಕ್ಷಿಸಲು ತುರ್ತು ಕ್ರಮಕೈಗೊಳ್ಳಬೇಕೆಂದು ಜಗತ್ತಿನೊಡನೆ ಆಗ್ರಹಿಸಿದ್ದಾಳೆ.

ತನ್ನ ದೇಶದ ಮಕ್ಕಳನ್ನು ರಕ್ಷಿಸಲು ಸೂಕ್ತ ಕ್ರಮಕೈಗೊಳ್ಳಿರಿ. ದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡಿರಿ ಎಂದು ಆಕೆ ಅಲವತ್ತುಕೊಂಡಿದ್ದಾಳೆ. ಮೂರು ವರ್ಷದ ಹಿಂದೆ ಯುದ್ಧ ಕಲುಷಿತ ಅಲೆಪ್ಪೊದಿಂದ ಟ್ವಿಟರ್ ಮೂಲಕ ಜಗತ್ತಿನ ಗಮನವನ್ನು ಸೆಳೆದಿದ್ದಳು.

ಬನಾಳಿಗೆ ಟರ್ಕಿ ದೇಶವು ಪೌರತ್ವವನ್ನು ನೀಡಿದೆ. ತನ್ನ ತಂದೆ-ತಾಯಿ ಮತ್ತು ಇಬ್ಬರು ಸಹೋದರರೊಂದಿಗೆ ಟರ್ಕಿಯಲ್ಲಿ ವಾಸಿಸುವ ಬನಾ ಸಿರಿಯದಲ್ಲಿ ತಾನು ಎದುರಿಸಿದ್ದ ಕಷ್ಟ, ಸಂಕಷ್ಟಗಳ ಕುರಿತು ಮಾಧ್ಯಮಗಳಿಗೆ ವಿವರಿಸಿದ್ದಳು. ಯುದ್ಧಕ್ಕಿಂತ ಮೊದಲು ಉತ್ತಮ ಸ್ಥಿತಿಯಲಿ ನಾವು ಸಿರಿಯದಲ್ಲಿ ಜೀವಿಸುತ್ತಿದ್ದೆವು. ಆದರೆ ಯುದ್ಧ ಆರಂಭವಾದೊಡನೆ ಎಲ್ಲವೂ ಬುಡಮೇಲಾಯ್ತು. ನಾನು, ನನ್ನ ಕುಟುಂಬದ ಯಾರೇ ಆಗಲಿ ಹತ್ಯೆಯಾಗಬಹುದು ಎಂಬ ಹೆದರಿಕೆ ನಮ್ಮನ್ನು ಬೆನ್ನಟ್ಟುತ್ತಿತ್ತು. ನನ್ನ ಗೆಳತಿ ಯಾಸ್ಮೀನ್ ಹತ್ಯೆಯಾದಳು.

ಆದರೆ ಸಿರಿಯಾದಲ್ಲಿ ಶಾಂತಿ ಮರುಕಳಿಸಬಹುದು ಎಂಬ ನಿರೀಕ್ಷೆ ಈಗಲೂ ನನ್ನಲ್ಲಿದೆ. ಅಲಪ್ಪೊದ ಮುತ್ತಿಗೆ ಕೊನೆಗೊಳಿಸಲು ಜಾಗತಿಕ ದೇಶಗಳು ತಯಾರಾಗಬೇಕು. ಈಗ ಅಲ್ಲಿ ನೀರು, ಆಹಾರ ಯಾವುದೂ ಇಲ್ಲ ಎಂದು ಬನಾ ಹೇಳುತ್ತಿದ್ದಾಳೆ.

error: Content is protected !! Not allowed copy content from janadhvani.com