ಮುಂಬೈ: ಈ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಗುವುದಿಲ್ಲ ಎಂಬ ಅದೇ ಪಕ್ಷದ ನಾಯಕ ರಾಮ್ ಮಾಧವ್ ಅವರ ಮಾತಿಗೆ ಮಹಾರಾಷ್ಟ್ರದ ಮಿತ್ರ ಪಕ್ಷ ಶಿವಸೇನೆ ಕೂಡ ಧ್ವನಿಗೂಡಿಸಿದೆ.
ಈ ಕುರಿತು ಅಭಿಪ್ರಾಯ ಹಂಚಿಕೊಂಡಿರುವ ಶಿವಸೇನೆಯ ನಾಯಕ ಸಂಜಯ್ ರಾವತ್, ‘ಬಿಜೆಪಿಗೆ ಸರಳ ಬಹುಮತ ಸಿಗುವ ಸಾಧ್ಯತೆಗಳು ಕಡಿಮೆ. ಸರ್ಕಾರ ರಚನೆ ಮಾಡಲು ಬಿಜೆಪಿ ಇತರ ಪಕ್ಷಗಳನ್ನು ಅವಲಂಭಿಸಲೇಬೇಕು,’ ಎಂದು ಅವರು ಹೇಳಿದ್ದಾರೆ.
‘ಬಿಜೆಪಿ ನಾಯಕ ರಾಮ್ ಮಾಧವ್ ಅವರ ಅಭಿಪ್ರಾಯ ಸರಿ. ಕೇಂದ್ರದಲ್ಲಿ ಎನ್‌ಡಿಎ ಮೈತ್ರಿಕೂಟ ಸರ್ಕಾರ ರಚನೆ ಮಾಡಲಿದೆ. ಬಿಜೆಪಿ ಬಹುದೊಡ್ಡ ಪಕ್ಷವಾಗಲಿದೆ. ಆದರೆ, ಈಗಿನ ಪರಿಸ್ಥಿತಿ ಅವಲೋಕಿಸಿದರೆ ಬಿಜೆಪಿ 280–282ರ ಗುರಿ ಮಟ್ಟುವುದು ಕಷ್ಟ ಸಾಧ್ಯ. ಆದರೆ, ಎನ್‌ಡಿಎ ಪರಿವಾರವು ಸರಳ ಬಹುಮತದ ಗಡಿ ದಾಟಲಿದೆ,’ ಎಂದು ರಾವತ್ ಹೇಳಿದ್ದಾರೆ.
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾದವ್ ಅವರು ಸೋಮವಾರ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ‘ಸರ್ಕಾರ ರಚನೆ ಮಾಡಲು ಬಿಜೆಪಿಗೆ ಮೈತ್ರಿ ಪಕ್ಷಗಳ ನೆರವು ಅಗತ್ಯವಾಗಲಿದೆ. ಆದರೆ, 271 ಸ್ಥಾನಗಳನ್ನು ನಾವು ಸ್ವತಂತ್ರವಾಗಿ ಗಳಿಸಿದರೆ ಅದು ನಮಗೆ ಸಂತೋಷ ನೀಡಲಿದೆ. ಆದರೆ, ಎನ್‌ಡಿಎ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಲಿದೆ,’ ಎಂದು ಹೇಳಿದ್ದರು.