janadhvani

Kannada Online News Paper

ರಾಜೀವ್ ಗಾಂಧಿಯನ್ನು ಅವಹೇಳಿಸಿದ ಮೋದಿ- ಸಿಎಂ ಕುಮಾರಸ್ವಾಮಿ ಖಂಡನೆ

ಈ ವರದಿಯ ಧ್ವನಿಯನ್ನು ಆಲಿಸಿ


ಬೆಂಗಳೂರು(ಮೇ.05): ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಸಾವಿನ ಕುರಿತಾದ ಪ್ರಧಾನಿ ಮೋದಿ ಹೇಳಿಕೆಗೆ ಸಿಎಂ ಎಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ, ಭ್ರಷ್ಟಾಚಾರಿ ನಂಬರ್ 1 ಹಣೆಪಟ್ಟಿಯೊಂದಿಗೆ ರಾಜೀವ್ ಗಾಂಧಿ ಬದುಕು ಅಂತ್ಯವಾಯಿತು ಎಂಬ ಮೋದಿ ಹೇಳಿಕೆ ಖಂಡನಾರ್ಹ. ಇದು ಕೇವಲ ತುಚ್ಛ ಹೇಳಿಕೆಯಲ್ಲ. ಜತೆಗೆ ಪ್ರಧಾನಿಗಳ ಮನಸ್ಥಿತಿ ಹೇಗಿದೆ ಎಂಬುದನ್ನು ತೋರಿಸುತ್ತದೆ. ಚುನಾವಣೆ ಫಲಿತಾಂಶಕ್ಕೆ ಮುನ್ನವೇ ಸೋಲುವ ಭೀತಿಯಲ್ಲಿ ಮೋದಿ ಹತಾಶರಾಗಿದ್ದಾರೆ ಎನ್ನುವುದಕ್ಕೆ ಇದೇ ಉದಾಹರಣೆ ಎಂದು ಕುಟುಕಿದ್ದಾರೆ.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು, ರಾಜೀವ್ ಗಾಂಧಿ ಬದುಕು ಭ್ರಷ್ಟಾಚಾರಿ ನಂಬರ್ 1 ಹಣೆಪಟ್ಟಿಯೊಂದಿಗೆ ಅಂತ್ಯವಾಯಿತು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಬಗ್ಗೆ ಭಾರಿ ವಿರೋಧ ವ್ಯಕ್ತವಾಗಿತ್ತು.

ಬಳಿಕ ಮೋದಿಯವರ ಹೇಳಿಕೆಗೆ ಟ್ವೀಟ್ ಮೂಲಕ ಉತ್ತರಿಸಿದ್ದ ರಾಹುಲ್ ಗಾಂಧಿ ಕೂಡ, ಚುನಾವಣೆ ಯುದ್ಧ ಮುಗಿದಿದೆ. ನಿಮ್ಮ ಕರ್ಮ ನಿಮಗಾಗಿ ಕಾಯುತ್ತಿದೆ. ಗೆಲ್ಲುವ ನಂಬಿಕೆ ಕಳೆದುಕೊಂಡು ಹತಾಶೆಯಲ್ಲಿ ನೀವು ನಮ್ಮ ತಂದೆ ಬಗ್ಗೆ ಏನೇ ಹೇಳಿಕೆ ನೀಡಿದರೂ ನಿಮಗೆ ಸಹಾಯವಾಗುವುದಿಲ್ಲ.ಅದೇನೆ ಇರಲಿ, ನಾನು ಮಾತ್ರ ನಿಮಗೆ ಪ್ರೀತಿ ತುಂಬಿದ ದೊಡ್ಡ ಅಪ್ಪುಗೆ’ ನೀಡುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.

ಈ ಬೆನ್ನಲ್ಲೇ ಪ್ರಿಯಾಂಕಾ ಗಾಂಧಿಯವರು ಕೂಡ ಪ್ರತಿಕ್ರಿಯಿಸಿದ್ದು, ಹುತಾತ್ಮರ ಹೆಸರಲ್ಲಿ ಮತ ಕೇಳುವ ಮೋದಿ ಮತ್ತೊಬ್ಬ ಹುತಾತ್ಮ ವ್ಯಕ್ತಿಗೆ ಅವಮಾನ ಮಾಡಿದ್ದಾರೆ. ಇದಕ್ಕೆ ಅಮೇಥಿಯ ಜನ ತಕ್ಕ ಉತ್ತರ ನೀಡಲಿದ್ದಾರೆ. ನನ್ನ ತಂದೆ ಅಮೇಥಿಯ ಜನರಿಗಾಗಿ ಪ್ರಾಣ ತ್ಯಾಗ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಮಾಜಿ ಹಣಕಾಸು ಮಂತ್ರಿ ಪಿ.ಚಿದಂಬರಂ, ಕಾಂಗ್ರೆಸ್ ವಕ್ತಾರ ಸ್ಯಾಮ್ ಪಿತ್ರೋಡಾ, ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಮೋದಿಯವರ ರಾಜೀವ್ ಗಾಂಧಿ ಬಗೆಗಿನ ಹೇಳಿಕೆಯನ್ನು ಖಂಡಿಸಿದ್ದಾರೆ.

error: Content is protected !! Not allowed copy content from janadhvani.com